ಹನೂರು: ಪವಾಡ ಪುರುಷ ನೆಲೆಸಿರುವ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಯುಗಾದಿ ಜಾತ್ರೆಯ ಸಡಗರ ಮನೆಮಾಡಿದೆ.
ಇಂದಿನಿಂದ ಮೂರು ದಿನಗಳ ಕಾಲ ಬೆಟ್ಟದಲ್ಲಿ ಜಾತ್ರೆಯ ವಿಜೃಂಭಣೆಯಿಂದ ನಡೆಯಲಿದ್ದು, ಬೆಟ್ಟಕ್ಕೆ ದ್ವಿಚಕ್ರ ವಾಹನ ಹಾಗೂ ಆಟೋರಿಕ್ಷಾ, ಗೂಡ್ಸ್ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.
ಈ ಕುರಿತು ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶ ಹೊರಡಿಸಿದ್ದು, ಹನೂರು ತಾಲ್ಲೂಕಿನ ಕೌದಳ್ಳಿ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಇಂದು ಅಮಾವಾಸ್ಯೆ ಪೂಜೆಯ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಸಹಸ್ರಾರು ಜನರು ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಇನ್ನು ನಾಳೆ ಬೆಟ್ಟಕ್ಕೆ ಯುಗಾದಿ ರಥೋತ್ಸವ ನಡೆಯಲಿದ್ದು, ರಥೋತ್ಸವಕ್ಕೆ ರಾಜ್ಯ ಮಾತ್ರವಲ್ಲದೇ ನೆರೆ ರಾಜ್ಯಗಳಿಂದಲೂ ಲಕ್ಷಾಂತರ ಜನರು ಸೇರುವ ನಿರೀಕ್ಷೆಯಿದೆ.
ಬೆಟ್ಟಕ್ಕೆ ಬರುವ ಸಾರ್ವಜನಿಕರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ.