ಹನೂರು: ಪವಾಡ ಪುರುಷ ನೆಲೆಸಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆಯ ಸಂಭ್ರಮ ಮನೆಮಾಡಿದೆ.
ಈ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಲಕ್ಷಾಂತರ ಮಂದಿ ಭೇಟಿ ನೀಡುತ್ತಿದ್ದು, ಮಾದಪ್ಪನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
ಇನ್ನು ಮಹದೇಶ್ವರ ಬೆಟ್ಟಕ್ಕೆ ಯುವಕರ ದಂಡೇ ಹರಿದು ಬರುತ್ತಿದ್ದು, ಇದಕ್ಕೆ ಪ್ರಮುಖ ಕಾರಣ ವಧುವಿನ ಹುಡುಕಾಟ ಎನ್ನಲಾಗುತ್ತಿದೆ.
ಕೊಳ್ಳೇಗಾಲ ತಾಲ್ಲೂಕಿನ ಹೊಸಮಾಲಂಗಿ ಗ್ರಾಮದ ಯುವಕರು ವಧು ಸಿಗಲೆಂದು ಹರಕೆ ಕಟ್ಟಿಕೊಂಡು ಬೆಟ್ಟಕ್ಕೆ ಬರಿಗಾಲು ಪಾದಯಾತ್ರೆ ಆರಂಭ ಮಾಡಿದ್ದಾರೆ.
ಗ್ರಾಮದಲ್ಲಿ 62ಕ್ಕೂ ಹೆಚ್ಚು ಯುವಕರಿದ್ದು, ಯಾರಿಗೂ ಕೂಡ ಮದುವೆಯಾಗಿಲ್ಲ. ಎಷ್ಟು ಹುಡುಕಿದರೂ ವಧು ಮಾತ್ರ ಸಿಗುತ್ತಿಲ್ಲ. ಹೀಗಾಗಿ ಯುವಕರು ಬರಿಗಾಲು ಪಾದಯಾತ್ರೆ ಆರಂಭಿಸಿದ್ದು, ಮಾದಪ್ಪ ಕರುಣೆ ತೋರಿಸಿ ಮದುವೆ ಮಾಡಿಸಲೆಂದು ಬೇಡಿಕೊಳ್ಳುತ್ತಿದ್ದಾರೆ.
ಇನ್ನು ಈ ಯುವಕರು ವರ್ಷ ವರ್ಷವೂ ಪಾದಯಾತ್ರೆ ನಡೆಸುತ್ತಿದ್ದು, ಮುಂದೊಂದು ದಿನ ಮಹದೇಶ್ವರ ಸ್ವಾಮಿ ನಮ್ಮೆಲ್ಲರ ಕೈಹಿಡಿಯುತ್ತಾನೆ ಎಂಬ ನಂಬಿಕೆ ಅವರಲ್ಲಿದೆ.