ಗುಂಡ್ಲುಪೇಟೆ : ತಾಲ್ಲೂಕಿನ ಮಂಚಹಳ್ಳಿ ಗ್ರಾಮದ ಮಂಜುನಾಥ ಎಂಬವರ ಜಮೀನಿಗೆ ಶನಿವಾರ ರಾತ್ರಿ ಕಾಡಾನೆ ನುಗ್ಗಿ ಕಟಾವು ಮಾಡಿ ಜಮೀನಿನ ಶೀಟಿನ ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದ 50 ಬಾಕ್ಸ್ ಟೊಮೆಟೊವನ್ನು ತಿಂದು, ತುಳಿದು ನಾಶ ಮಾಡಿ, ಶೀಟಿನ ಮನೆಯನ್ನೂ ಧ್ವಂಸ ಮಾಡಿದೆ.
ರೈತ ಬೆಳೆದಿದ್ದ ಟೊಮೆಟೊ, ಶೀಟಿನ ಮನೆ ನಾಶದಿಂದ ಲಕ್ಷಾಂತರ ರೂ. ನಷ್ಟವಾಗಿದ್ದು ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಾಡಂಚಿನ ಗ್ರಾಮಗಳಾದ ಮಂಚಹಳ್ಳಿ, ಸವಕನಹಳ್ಳಿ, ಪಾಳ್ಯ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ದಿನನಿತ್ಯ ಕಾಡಾನೆ ದಾಳಿ ಮಾಡದಂತೆ ಪ್ರಾಣ ಪಣಕ್ಕಿಟ್ಟು ಕಾವಲು ಕಾಯುವುದೇ ಕೆಲಸವಾಗಿದೆ. ಕಾಡಾನೆ ದಾಳಿ ವೇಳೆ ಸುತ್ತುಬೇಲಿ, ಬೆಳೆಗಳ ನಷ್ಟ ಅನುಭವಿಸುತ್ತಿರುವ ರೈತರು ಕಂಗಾಲಾಗಿದ್ದಾರೆ. ಕಾಡಾನೆ ಹಾವಳಿ ತಡೆಗೆ ಅರಣ್ಯ ಇಲಾಖೆ ಶಾಶ್ವತ ಪರಿಹಾರ ರೂಪಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.





