ಗುಂಡ್ಲುಪೇಟೆ: ಕಾಡುಪ್ರಾಣಿಗಳ ಹಾವಳಿಗೆ ಬ್ರೇಕ್ ಹಾಕಿ. ನಷ್ಟಕ್ಕೆ ಒಳಗಾದವರಿಗೆ ಪರಿಹಾರ ನೀಡಿ ಎಂದು ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರು ಅರಣ್ಯಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಗುಂಡ್ಲುಪೇಟೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಓಂಕಾರ ಅರಣ್ಯ ವಲಯದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದ್ದು, ಜನರಲ್ಲಿರುವ ಭಯದ ವಾತಾವರಣವನ್ನು ಅರಣ್ಯಾಧಿಕಾರಿಗಳು ಹೋಗಲಾಡಿಸಬೇಕು. ರೈತರು ತೇಗದ ಮರ ಕಟಿಂಗ್‌ಗೆ ಅರಣ್ಯ ಇಲಾಖೆ ಕಚೇರಿಗೆ ಭೇಟಿ ನೀಡುತ್ತಾರೆ. ಅವರನ್ನು ಜಾಸ್ತಿ ಅಲೆಸಬೇಡಿ. ಬೇಗ ಕಟಿಂಗ್ ಮಾಡಿಕೊಡಿ. ವಿಳಂಬವಾದರೆ ನನಗೆ ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಆಗಬಾರದು ಎಂದು ಅರಣ್ಯಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಇನ್ನೂ ಸಭೆಯಲ್ಲಿ ಓಂಕಾರ ವಲಯದಂಚಿನ ಗ್ರಾಮಗಳ ರೈತರ ಬೆಳೆ ಹಾನಿ, ಜಾನುವಾರು ಮೇಲೆ ಪ್ರಾಣಿಗಳ ದಾಳಿಗೆ ಅರಣ್ಯ ಇಲಾಖೆ 84 ಲಕ್ಷ ಪರಿಹಾರ ನೀಡಿದೆ. ಇನ್ನೂ 29 ಲಕ್ಷ ಪರಿಹಾರ ನೀಡಬೇಕಿದೆ ಎಂದು ಓಂಕಾರ ವಲಯ ಅರಣ್ಯಾಧಿಕಾರಿ ಸತೀಶ್ ಕುಮಾರ್ ಮಾಹಿತಿ ನೀಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಸಚಿವರೊಂದಿಗೆ ಮಾತನಾಡಿ ಅನುದಾನ ಕೊಡಿಸಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.