ಕೊಳ್ಳೇಗಾಲ: ತಾಲ್ಲೂಕಿನ ಗುಂಡಾಲ್ ಜಲಾಶಯ ವ್ಯಾಪ್ತಿಯ ಜಮೀನುಗಳಿಗೆ ಜಿಂಕೆಗಳು, ಕಡವೆಗಳು ಸೇರಿದಂತೆ ಕಾಡುಪ್ರಾಣಿಗಳು ದಾಳಿ ನಡೆಸಿ ಫಸಲು ನಾಶಪಡಿಸಿರುವ ಘಟನೆ ಜರುಗಿದೆ.
ಮೋಡಹಳ್ಳಿ ಗ್ರಾಮದ ಗುಂಡಾಲ್ ವ್ಯಾಪ್ತಿಯ ಸರ್ವೇ ನಂ 558 ನ 3.40 ಎಕರೆ ಜಮೀನನ್ನು ಕೊಳ್ಳೇಗಾಲ ಮೋಳೆ ಬಡಾವಣೆಯ ಗೌರಮ್ಮ ಎನ್ನುವರು ಗುತ್ತಿಗೆ ಪಡೆದು ಜಮೀನಿನಲ್ಲಿ ಭತ್ತ ಬೆಳೆದಿದ್ದರು. ಇಲ್ಲಿಗೆ ಜಿಂಕೆಗಳು, ಕಡವೆಗಳು ನುಗ್ಗಿ ಸಂಪೂರ್ಣ ಬೆಳೆ ಹಾನಿ ಮಾಡಿದ್ದು, ಸುಮಾರು ಎರಡು ಲಕ್ಷ ರೂ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಗುಂಡಾಲ್ ಪ್ರದೇಶದ ಜಮೀನಿಗಳಿಗೆ ಎರಡು ಮೂರು ತಿಂಗಳಿಂದ ಕಾಡು ಪ್ರಾಣಿಗಳು ದಾಳಿ ನಡೆಸುತ್ತಿದ್ದರೂ ಸಹಾ ಯಾವುದೇ ಅಧಿಕಾರಿಗಳು ಅವುಗಳನ್ನು ತಡೆಗಟ್ಟಲು ಮುಂದಾಗುತ್ತಿಲ್ಲ. ಕಾಡುಪ್ರಾಣಿಗಳನ್ನು ರೈತರೇ ತಡೆಗಟ್ಟಲು ಪಟಾಕಿ ಕೇಳಿದರೂ ಸಹಾ ಅರಣ್ಯ ಅಧಿಕಾರಿಗಳು ನಿರಾಕರಿಸಿದ್ದಾರೆ.
ಇದರಿಂದಾಗಿ ಜಮೀನುಗಳಿಗೆ ಕಾಡುಪ್ರಾಣಿಗಳು ದಾಳಿ ಮಾಡಿ ಕಟಾವಿಗೆ ಬಂದ ಫಸಲನ್ನು ಹಾಳು ಮಾಡುತ್ತಿವೆ. ಕಾಡುಪ್ರಾಣಿಗಳ ಹಾವಳಿಗೆ ನೇರ ಹೊಣೆ ಅರಣ್ಯ ಅಧಿಕಾರಿಗಳೇ ಎಂದು ರೈತ ಸಂಘದ ಅಧ್ಯಕ್ಷರಾದ ಮಾದೇಶ್ ಆರೋಪ ಮಾಡಿದ್ದಾರೆ. ಬೆಳೆ ನಾಶಕ್ಕೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.





