Mysore
30
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಸಾವಿರಾರು ಸಾರ್ವಜನಿಕರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿದ ಬಿಳಿ ಕುದುರೆ ವಾಹನ ಉತ್ಸವ

ಹನೂರು: ತಾಲೂಕಿನ ಪ್ರಸಿದ್ದ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಶನಿವಾರ ರಾತ್ರಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಹಾಗೂ ಸಾವಿರಾರು ಸಾರ್ವಜನಿಕರ ಸಮ್ಮುಖದಲ್ಲಿ ಬಿಳಿ ಕುದುರೆ ವಾಹನ ಉತ್ಸವವು ವಿಜೃಂಭಣೆಯಿಂದ ನೆರವೇರಿತು. ಈ ಮೂಲಕ ಶರನ್ನವರಾತ್ರಿ ಉಯ್ಯಾಲೋತ್ಸವಕ್ಕೆ ತೆರೆ ಬಿದ್ದಿತು.

ದಸರಾ ಮಹೋತ್ಸವದ ಅಂಗವಾಗಿ ಮಾದಪ್ಪನ ದೇಗುಲದ ಪಶ್ಚಿಮ ದಿಕ್ಕಿನ ಕಂಠಶಾಲೆಯ ಆವರಣದಲ್ಲಿ ತೂಗೂಯ್ಯಾಲೆಯನ್ನು ನಿರ್ಮಿಸಿ ಅ.3 ರಂದು ರಾತ್ರಿ ಶಿವ ಪಾರ್ವತಿ ಉತ್ಸವಮೂರ್ತಿಯನ್ನು ಕೂರಿಸಿ ಶರನ್ನವರಾತ್ರಿ ಉಯ್ಯಾಲೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ಬೇಡಗಂಪಣ ಸಂಪ್ರದಾಯದಂತೆ 9 ದಿನಗಳ ಕಾಲ ರಾತ್ರಿ 8.30ರ ಬಳಿಕ (ದೇಗುಲದಲ್ಲಿ ಪೂಜೆ ನಂತರ) ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಬೇಡ ಗಂಪಣ ಅರ್ಚಕರಿಂದ ಪಡಿಸೇವೆ ಹಾಗೂ ವಿಶೇಷ ಪೂಜೆಯನ್ನು ಸಲ್ಲಿಸುವುದರ ಮೂಲಕ ಉಯ್ಯಾಲೋತ್ಸವವನ್ನು ನೆರವೇರಿಸಲಾಗುತ್ತಿತ್ತು. ಜೊತೆಗೆ ಮಹಾನವಮಿಯಂದು ಆಯುಧಗಳಿಗೆ ಪೂಜೆಯನ್ನು ಸಲ್ಲಿಸಲಾಗಿತ್ತು. ಶನಿವಾರ ರಾತ್ರಿ ವಿಜಯದಶಮಿಯ ಹಿನ್ನೆಲೆ ಶ್ವೇತ ವರ್ಣದ ಕುದುರೆ ವಾಹನೋತ್ಸವವನ್ನು ಸಾವಿರಾರು ಸಾರ್ವಜನಿಕರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಯಿತು.

ಜಂಬೂ ಸವಾರಿ: ವಿಜಯದಶಮಿ ಹಿನ್ನಲೆ ದೇಗುಲದಲ್ಲಿ ರಾತ್ರಿ 9ರ ವೇಳೆಯಲ್ಲಿ ಮಾದಪ್ಪನಿಗೆ ಪೂಜೆಯನ್ನು ಸಲ್ಲಿಸಲಾಯಿತು. ಬಳಿಕ ವಜ್ರಾಭರಣದಿಂದ ಸಿಂಗರಿಸಿದ್ದ ಶಿವ, ಪಾರ್ವತಿ ಉತ್ಸವಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿದ್ದ ಶ್ವೇತ ವರ್ಣದ ಕುದುರೆಯಲ್ಲಿ ಕೂರಿಸಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಬೇಡಗಂಪಣ ಅರ್ಚಕರಿಂದ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ದುಷ್ಟ ಶಕ್ತಿಯ ಸಂಹಾರದ ಪ್ರತೀಕವಾಗಿ ಮಹದೇಶ್ವರಸ್ವಾಮಿಯ ಪಟ್ಟದ ಕತ್ತಿಯನ್ನು ಹಿಡಿದ ಬೇಡಗಂಪಣ ಅರ್ಚಕರು, ಶ್ರೀಗಳು ಹಾಗೂ ಸಾವಿರಾರು ಮಂದಿಯ ಸಮ್ಮುಖದಲ್ಲಿ ಸತ್ತಿಗೆ, ಸೂರಿಪಾನಿ, ನಂದಿಧ್ವಜ ಹಾಗೂ ವಾದ್ಯಮೇಳದೊಂದಿಗೆ ಕುದುರೆ ವಾಹನ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕುವುದರ ಮೂಲಕ ಉತ್ಸವವನ್ನು ನೆರವೇರಿಸಲಾಯಿತು. ಈ ವೇಳೆ ನೆರೆದಿದ್ದ ಜನತೆ ಉಘೇ ಮಾದಪ್ಪ, ಜೈ ಮಹತ್ ಮಲೆಯಾ ಎಂಬಿತ್ಯಾದಿ ಜಯಘೋಷಗಳನ್ನು ಮೊಳಗಿಸಿದರು. ಈ ಮೂಲಕ ಮ.ಬೆಟ್ಟದಲ್ಲೂ ಜಂಬೂ ಸವಾರಿಯನ್ನು ನಡೆಸಿ ಶರನ್ನವರಾತ್ರಿಗೆ ತೆರೆ ಎಳೆಯಲಾಯಿತು.

ವಿಶೇಷ ಪೂಜೆಯಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್ ಗುಂಡೇಗಾಲ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Tags: