ಚಾಮರಾಜನಗರ ; ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುತ್ತಿದ್ದು ಜಲಾಶಯಗಳು, ಕೆರೆ ಕಟ್ಟೆಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಚಾಮರಾಜನಗರ, ಗುಂಡ್ಲುಪೇಟೆ, ಹನೂರಿನ ಹತ್ತಾರು ಕೆರೆಗಳು ಕೋಡಿ ಬಿದ್ದಿವೆ, ಹಳ್ಳಗಳು ಉಕ್ಕಿ ಹರಿಯುತ್ತಿದ್ದು ಬೆಳೆಗಳು ಜಲಾವೃತವಾಗಿ ರೈತರು ನಷ್ಟದ ಭೀತಿಯನ್ನು ಎದುರಿಸುತ್ತಿದ್ದಾರೆ.
ಚಾಮರಾಜನಗರ ತಾಲ್ಲೂಕಿನ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳಿಂದ 1,400 ಕ್ಯೂಸೆಕ್‍ಗಳಷ್ಟು ನೀರನ್ನು ನದಿಗೆ ಹರಿಸಲಾಗುತ್ತಿದೆ. ಮರಗದಕೆರೆ, ಕೋಡಿಮೋಳೆ ಕೆರೆ ಸೇರಿದಂತೆ ವಿವಿಧ ಕೆರೆಗಳ ಹೆಚ್ಚುವರಿ ನೀರುಕೂಡ ಸುವರ್ಣಾವತಿ ನದಿ ಸೇರುತ್ತಿದ್ದು,ಅದರ ನೀರಿನ ಮಟ್ಟ ಹೆಚ್ಚಾಗಿದ್ದು, ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ಯಳಂದೂರಿನಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಮೋಳೆ, ದೊಡ್ಡಮೋಳೆ, ಬ್ಯಾಡಮೂಡ್ಲು ಗ್ರಾಮಗಳಲ್ಲಿ ಕೆರೆಗಳು ಉಕ್ಕಿ ಹರಿದಿರುವುದರಿಂದ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.





