ಹನೂರು: ಪಟ್ಟಣದಿಂದ ಮಣಗಳ್ಳಿ, ಬಂಡಳ್ಳಿ, ಶಾಗ್ಯ, ಗಾಣಿಗ ಮಂಗಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟು ಸಂಚಾರಕ್ಕೆ ತೊಂದರೆಯಾಗಿದ್ದರೂ ಕ್ರಮ ಕೈಗೊಳ್ಳದೆ ಇರುವುದಕ್ಕೆ ಸಾರ್ವಜನಿಕರೇ ರಸ್ತೆಯ ಗುಂಡಿ ಮುಚ್ಚಿಸಿಕೊಳ್ಳುತ್ತಿದ್ದಾರೆ. ಒಂದೆಡೆ ಅಭಿವೃದ್ಧಿಯ ಜಪ ಮಾಡುತ್ತಿರುವ ಶಾಸಕರಿಗೆ ಇದು ಹಿನ್ನಡೆಯಾದಂತಾಗಿದೆ.
ಹನೂರು (Hanooru) ತಾಲ್ಲೂಕು ಕೇಂದ್ರದಿಂದ ಬಂಡಳ್ಳಿ ಕೇಂದ್ರ ಸ್ಥಾನ ಸೇರಿದಂತೆ ಐವತ್ತಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟು ಹಲವು ವರ್ಷಗಳೇ ಕಳೆದಿವೆ.
ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಹಲವಾರು ಬಾರಿ ಬಿದ್ದು ಗಾಯಗೊಂಡಿದ್ದಾರೆ. ಬಟ್ಟಗುಪ್ಪೆ ಗ್ರಾಮದ ಸಮೀಪ ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಹೆರಿಗೆಗೆ ಕರೆದುಕೊಂಡು ಬರುತ್ತಿದ್ದ ಗರ್ಭಿಣಿಯೊಬ್ಬರಿಗೆ ಗರ್ಭಪಾತವಾಗಿದೆ. ಇಷ್ಟಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದಿರುವುದಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಡಳ್ಳಿ ಗ್ರಾಮದ ಮಹೇಶ್ ಎಂಬುವರು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹರಿಬಿಟ್ಟು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ವಿಡಿಯೋದಲ್ಲಿ ಆತ್ಮೀಯ ಕರುನಾಡು ಬಂಧುಗಳೇ, ಹನೂರು ಪಟ್ಟಣದಿಂದ ಶಾಗ್ಯ ಗ್ರಾಮದ ವರೆಗಿನ ರಸ್ತೆ ಕಳೆದ 30 ವರ್ಷಗಳಿಂದ ಸಂಪೂರ್ಣ ದುರಸ್ತಿ ಆಗಿರುವುದರಿಂದ ಈ ಭಾಗದ ಜನರಿಗೆ ನಿತ್ಯ ತೊಂದರೆಯಾಗುತ್ತಿದೆ. ಆದರೆ ನಾಚಿಕೆಗೆಟ್ಟ ಸರಕಾರ ನಮ್ಮ ರಸ್ತೆಯನ್ನು ಅಭಿವೃದ್ಧಿಪಡಿಸುವಲ್ಲಿ ವಿಫಲವಾಗಿದೆ. ಈ ವಿಡಿಯೋ ರಾಜ್ಯ ಸರ್ಕಾರಕ್ಕೆ ತಲುಪುವವರೆಗೂ ಶೇರ್ ಮಾಡುವಂತೆ ಮನವಿ ಮಾಡಿದ್ದಾರೆ.
ಶಾಗ್ಯ ಗ್ರಾಮಸ್ಥರಿಂದ ಗುಂಡಿ ಮುಚ್ಚುವಿಕೆ: ಹನೂರು ತಾಲೂಕಿನ ಶಾಗ್ಯ ಗ್ರಾಮದಲ್ಲಿ ಹದಿಮೂರು ವರ್ಷಗಳ ನಂತರ ಜಾತ್ರಾ ಮಹೋತ್ಸವ ನಡೆಯುತ್ತಿರುವುದರಿಂದ ಗ್ರಾಮಕ್ಕೆ ಕುಟುಂಬಸ್ಥರು ಹಾಗೂ ನೆಂಟರಿಷ್ಟರು ಆಗಮಿಸುತ್ತಿರುವುದರಿಂದ ಯಾವುದೇ ತೊಂದರೆಯಾಗದಿರಲಿ ಎಂಬ ದೃಷ್ಟಿಯಿಂದ ಶಾಗ್ಯ ಗ್ರಾಮದ ನಿವಾಸಿಗಳೇ ಗುಂಡಿ ಮುಚ್ಚಿಸಿ ಕೊಳ್ಳುವ ಮೂಲಕ ಜನಪ್ರತಿನಿಧಿಗಳಿಗೆ ಶೆಡ್ಡು ಹೊಡೆದಿದ್ದಾರೆ.
ಹನೂರು ವಿಧಾನಸಭಾ ಕ್ಷೇತ್ರದ ಜನಪ್ರತಿನಿಧಿಗಳು ರಸ್ತೆ ದುರಸ್ತಿ ಮಾಡದೆ ಇರುವುದರಿಂದ, ಶಾಗ್ಯ ಗ್ರಾಮದಲ್ಲಿ 13 ವರ್ಷದ ಬಳಿಕ ಮಾರಿ ಹಬ್ಬ ನಡೆಯುತ್ತಿದೆ. ಕಿತ್ತೋಗಿರುವ ರಸ್ತೆಗೆ ಮಣ್ಣಿನ ಭಾಗ್ಯ ನೀಡಿದ್ದಾರೆ ಇನ್ನು ಮುಂದಾದರು ಜನಪ್ರತಿನಿಧಿಗಳು ಎಚ್ಚೆತ್ತು ರಸ್ತೆ ಅಭಿವೃದ್ಧಿಪಡಿಸಬೇಕು. ಸದಾಶಿವ, ಬಂಡಳ್ಳಿ ನಿವಾಸಿ





