ಚಾಮರಾಜನಗರ : ಬಿಜೆಪಿಯಿಂದ ಸಚಿವ ವಿ.ಸೋಮಣ್ಣ ಸ್ಪರ್ಧಿಸಿದರೂ ಗೆಲುವು ನನ್ನದೇ ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ‘ಕ್ಷೇತ್ರದಾದ್ಯಂತ ಅಭಿವೃದ್ಧಿ ಮಾಡಿದ್ದೇನೆ. ಜನರು ನನ್ನ ಪರವಾಗಿದ್ದಾರೆ. ಅವರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಹಾಗಾಗಿ, ನನಗೆ ಗೆಲುವಿನ ವಿಶ್ವಾಸವಿದೆ’ ಎಂದರು.
‘ನೀವು, ಸೋಮಣ್ಣ ಸ್ನೇಹಿತರು. ಈ ಚುನಾವಣೆಯನ್ನು ಸ್ನೇಹಿತರ ಸವಾಲ್ ಎಂದು ಕರೆಯಬಹುದೇ’ ಎಂದು ಕೇಳಿದ್ದಕ್ಕೆ, ‘ಚುನಾವಣೆಯೇ ಬೇರೆಗೆ, ಸ್ನೇಹವೇ ಬೇರೆ. ಇಲ್ಲಿ ನಾವಿಬ್ಬರೂ ಪ್ರತಿಸ್ಪರ್ಧಿಗಳು. ನಾನು ಗೆಲ್ಲುವುದಕ್ಕೆ ಎಲ್ಲ ಪ್ರಯತ್ನಗಳನ್ನೂ ಮಾಡುತ್ತೇನೆ’ ಎಂದರು.
ಎಸ್‌ಡಿಪಿಐ ಬಿಎಸ್‌ಪಿ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಮೈತ್ರಿ ಮಾಡಿಕೊಳ್ಳುವುದು ಅವರಿಷ್ಟ. ನಾನೇನೂ ಹೇಳುವುದಿಲ್ಲ. ಪಕ್ಷದ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಹೇಳಿದರು.
ಕಾರ್ಯಕರ್ತರ ಸಭೆ ಇಂದು: ಈ ಮಧ್ಯೆ, ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಗುರುವಾರ ಚಾಮರಾಜನಗರಕ್ಕೆ ಬರಲಿದ್ದು, ಸಂಜೆ 4.30ಕ್ಕೆ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ.





