ಹನೂರು: ಪವಾಡ ಪುರುಷ ನೆಲೆಸಿರುವ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ರಥೋತ್ಸವ ಅದ್ಧೂರಿಯಾಗಿ ಜರುಗಿತು.
ಇಂದು ಬೆಳಿಗ್ಗೆ 8-9ರವರೆಗಿನ ಶುಭ ಲಗ್ನದಲ್ಲಿ ಯುಗಾದಿ ರಥೋತ್ಸವ ಲಕ್ಷಾಂತರ ಸಾರ್ವಜನಿಕರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.
ಯುಗಾದಿ ರಥೋತ್ಸವಕ್ಕೆ ರಾಜ್ಯ ಅಷ್ಟೇ ಅಲ್ಲದೇ ನೆರೆ ರಾಜ್ಯಗಳಿಂದಲೂ ಸಹಸ್ರಾರು ಸಾರ್ವಜನಿಕರು ಆಗಮಿಸಿದ್ದರು.
ಶ್ರೀ ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಬೇಡಗಂಪಣ ಅರ್ಚಕರು ಹಾಗೂ ಸಹಸ್ರಾರು ಸಾರ್ವಜನಿಕರ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ದೇಗುಲದ ಮುಖ್ಯದ್ವಾರದ ಆವರಣದಿಂದ ಸತ್ತಿಗೆ ಸೂರಿಪಾನಿ, ಛತ್ರಿ, ಚಾಮರ, ನಂದಿಧ್ವಜ ಹಾಗೂ ಮಂಗಳವಾದ್ಯದೊಂದಿಗೆ ತೇರು ಎಳೆಯಲಾಯಿತು.
ಹುಲಿವಾಹನ, ಬಸವ ವಾಹನ ಹಾಗೂ ರುದ್ರಾಕ್ಷಿ ವಾಹನೋತ್ಸವವು ನಡೆಯಿತು..
ವೀರಗಾಸೆ ಕುಣಿತ ನೆರೆದಿದ್ದ ಸಾರ್ವಜನಿಕರ ಗಮನ ಸೆಳೆಯಿತು. ಈ ವೇಳೆ ಜನರು ತೇರಿಗೆ ಹಣ್ಣು, ದವಸ ಧಾನ್ಯಗಳನ್ನು ಎಸೆದು ಮಾದಪ್ಪನ ಕೃಪೆಗೆ ಪಾತ್ರರಾದರು.





