ಹನೂರು: ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಪಿ.ಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಗುಂದಿ ಗ್ರಾಮದಲ್ಲಿ ಜರುಗಿದೆ.
ಹನೂರು ತಾಲೂಕಿನ ಪಿಜಿ ಪಾಳ್ಯ ಗ್ರಾಮದ ಚಾಮರಾಜು (25), ಆಕಾಶ್ ( 22) ಮೃತಪಟ್ಟ ಯುವಕರಾಗಿದ್ದಾರೆ.
ಘಟನೆಯ ವಿವರ: ಹನೂರು ತಾಲೂಕಿನ ಪಿ.ಜಿ ಪಾಳ್ಯ ಗ್ರಾಮದ ನಿವಾಸಿಗಳಾದ ಚಾಮರಾಜು ಚಾಲಕ ವೃತ್ತಿ ಮಾಡಿಕೊಂಡಿದ್ದರೆ ಆಕಾಶ್ ಬೇಕರಿಯಲ್ಲಿ ಕೆಲಸ ಮಾಡಿಕೊಂಡು ಬೆಂಗಳೂರಿನಲ್ಲಿ ವಾಸವಿದ್ದಾರೆ.
ಭಾನುವಾರ ಸಂಬಂಧಿಕರ ಗೃಹಪ್ರವೇಶ ಇದ್ದ ಹಿನ್ನೆಲೆ ಪಿ.ಜಿ ಪಾಳ್ಯ ಗ್ರಾಮಕ್ಕೆ ಆಗಮಿಸಿದ್ದಾರೆ. ಗೃಹಪ್ರವೇಶ ಮುಗಿಸಿ ದೊಡ್ಡಪ್ಪ ಕೆಂಪರಾಜುರವರ ಜಮೀನಿನಲ್ಲಿರುವ ಕೃಷಿ ಹೊಂಡದಲ್ಲಿ ಈಜಲು ಹೋಗಿ ಮೇಲೆ ಬರಲು ಸಾಧ್ಯವಾಗದೆ ಕಾಪಾಡುವಂತೆ ಕೂಗಿಕೊಂಡಿದ್ದಾರೆ. ಇದನ್ನು ಗಮನಿಸಿದ ದೊಡ್ಡಪ್ಪ ಮೇಲೆತ್ತಲು ಇನ್ನಿಲ್ಲದ ಪ್ರಯತ್ನ ನಡೆಸಿ ದಡ ಸೇರಿಸಿದ್ದಾರೆ ಆದರೆ ಅಷ್ಟರ ವೇಳೆಗೆ ಇಬ್ಬರು ಮೃತಪಟ್ಟಿದ್ದರು ಎನ್ನಲಾಗಿದೆ.
ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಮೃತಪಟ್ಟಿರುವ ಘಟನೆ ತಿಳಿಯುತ್ತಿದ್ದಂತೆ ಹನೂರು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





