Mysore
28
clear sky

Social Media

ಶುಕ್ರವಾರ, 23 ಜನವರಿ 2026
Light
Dark

ಹನೂರು| ಲೊಕ್ಕನಹಳ್ಳಿ-ಒಡೆಯರಪಾಳ್ಯ ಮಾರ್ಗಮಧ್ಯೆ ಎರಡು ಚಿರತೆಗಳು ಪ್ರತ್ಯಕ್ಷ: ಆತಂಕದಲ್ಲಿ ವಾಹನ ಸವಾರರು

ಮಹಾದೇಶ್‌ ಎಂ ಗೌಡ 

ಹನೂರು: ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಭಕ್ತನ ಮೇಲೆ ಚಿರತೆ ದಾಳಿ ನಡೆಸಿ ಮೃತಪಟ್ಟ ಘಟನೆ ಮಾಸುವ ಮುನ್ನವೇ ಲೊಕ್ಕನಹಳ್ಳಿ ಒಡೆಯರಪಾಳ್ಯ ಮಾರ್ಗ ಮಧ್ಯದಲ್ಲಿ ಎರಡು ಚಿರತೆ ಕಾಣಿಸಿಕೊಂಡಿರುವುದು ರೈತರು ಹಾಗೂ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಪಿ ಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕರಂಗಶೆಟ್ಟಿ ದೊಡ್ಡಿ ಸಮೀಪ ರಸ್ತೆಯ ಬದಿಯಲ್ಲಿ ಎರಡು ಚಿರತೆ ಕಾಣಿಸಿಕೊಂಡಿರುವುದು ವಾಹನ ಸವಾರರಲ್ಲಿ ನಡುಕ ಪ್ರಾರಂಭವಾಗಿದೆ.

ಮಲೆ ಮಹದೇಶ್ವರ ವನ್ಯಧಾಮ ಹಾಗೂ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವೂ ಗಡಿ ಹಂಚಿಕೊಂಡಿರುವುದರಿಂದ ಹುಲಿ ಹಾಗೂ ಚಿರತೆಗಳು ಆಗಾಗ ವಾಹನ ಸವಾರರಿಗೆ ಕಾಣಿಸಿಕೊಳ್ಳುತ್ತಿದೆ.

ಗುರುವಾರ ಸಂಜೆ ಲೊಕ್ಕನಹಳ್ಳಿ ಮಾರ್ಗದಿಂದ ಒಡೆಯರ ಪಾಳ್ಯ ಗ್ರಾಮಕ್ಕೆ ಹೋಗುತ್ತಿದ್ದ ವಾಹನ ಸವಾರರಿಗೆ ಬಿಆರ್‌ಟಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ಎರಡು ಚಿರತೆ ಕಾಣಿಸಿಕೊಂಡಿದೆ. ವಾಹನ ಸವಾರರು ಚಿರತೆಯನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಎಚ್ಚರದಿಂದ ದ್ವಿಚಕ್ರ ವಾಹನ ಸವಾರರು ತೆರಳುವಂತೆ ಮನವಿ ಮಾಡಿದ್ದಾರೆ.

ಕಳೆದ ಹಲವಾರು ತಿಂಗಳಿನಿಂದ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ರೈತರು ಬೆಳೆದ ಬೆಳೆಗಳನ್ನು ಸಂರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಸಾಕು ನಾಯಿಗಳು ಮೇಕೆ ಹಾಡು ಕುರಿಗಳ ಮೇಲೆ ಚಿರತೆ ನಿರಂತರವಾಗಿ ದಾಳಿ ಮಾಡುತ್ತಿರುವುದರಿಂದ ರೈತರು ಹಲವಾರು ಸಾಕುಪ್ರಾಣಿಗಳನ್ನು ಕಳೆದುಕೊಂಡಿದ್ದಾರೆ. ಸಮರ್ಪಕವಾಗಿ ಮಳೆ ಇಲ್ಲದೆ ರೈತರು ಒಂದೆಡೆ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಇನ್ನೊಂದೆಡೆ ಕಾಡು ಪ್ರಾಣಿಗಳ ಹಾವಳಿಯಿಂದ ತತ್ತರಿಸಿ ಹೋಗಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಕ್ರಮ ವಹಿಸುವಂತೆ ಹಲವಾರು ಬಾರಿ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಮಂಗಳವಾರವು ಸಹ ಬಂಗಾರು ಎಂಬುವರ ಜಮೀನಿಗೆ ಕಳೆದ ನಾಲ್ಕು ದಿನಗಳಿಂದ ಕಾಡಾನೆ ದಾಳಿ ಮಾಡಿ ಜಮೀನಿನಲ್ಲಿ ಬೆಳೆದಿದ್ದ ತರಕಾರಿ ಬೆಳೆ, ತೆಂಗಿನ ಮರಗಳ ನಾಶಪಡಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದನ್ನು ಸ್ಮರಿಸಬಹುದಾಗಿದೆ.

ಬಿಆರ್‌ಟಿ ವಲಯ ವ್ಯಾಪ್ತಿಯಲ್ಲಿ ಚಿರತೆ ಕಾಣಿಸಿಕೊಂಡಿರುವುದರಿಂದ ಬೆಳೆಗಳನ್ನು ಸಂರಕ್ಷಣೆ ಮಾಡಲು ಹೋಗುವ ರೈತರು ಹಾಗೂ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸುವಾಗ ಎಚ್ಚರಿಕೆ ವಹಿಸಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಿ, ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಗಸ್ತು ಮಾಡಲು ನಿಯೋಜಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಪರಿಸರ ಪ್ರೇಮಿ ಎನ್ ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ.

 

Tags:
error: Content is protected !!