ಚಾಮರಾಜನಗರ: ಪವಾಡ ಪುರುಷ ನೆಲೆಸಿರುವ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ 63 ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರದಿಂದ ವಿಜೃಂಭಣೆಯಿಂದ ನಡೆದ ಉಚಿತ ಸಾಮೂಹಿಕ ವಿವಾಹದಲ್ಲಿ ಈ ಜೋಡಿಗಳು ಸತಿ-ಪತಿಗಳಾದರು.
ಸುತ್ತೂರು ಶ್ರೀ, ಸಾಲೂರು ಮಠದ ಸ್ವಾಮೀಜಿ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ನೂತನ ದಂಪತಿಗಳಿಗೆ ಮಾಂಗಲ್ಯ ವಿತರಿಸಿ ಶುಭ ಹಾರೈಸಿದರು.
ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರತಿ ವರ್ಷ ಸಾಮೂಹಿಕ ವಿವಾಹ ನಡೆಯಲಿದ್ದು, ಮಾದಪ್ಪನ ಸನ್ನಿಧಿಯಲ್ಲಿ ಸತಿಪತಿಗಳಾಗುವುದು ಪುಣ್ಯವೆಂದೇ ಸಾರ್ವಜನಿಕರ ನಂಬಿಕೆಯಾಗಿದೆ.
ಸಾಮೂಹಿಕ ವಿವಾಹದಲ್ಲಿ ಭಾಗಿಯಾದ ನವಜೋಡಿಗಳಿಗೆ ಮಾಂಗಲ್ಯ, ರೇಷ್ಮೆ ಸೀರೆ, ಪಂಚೆ-ಶಲ್ಯ, ಬೆಳ್ಳಿ ಕಾಲುಂಗುರವನ್ನು ಪ್ರಾಧಿಕಾರ ನೀಡಿದೆ.
ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಕಳೆದ ವರ್ಷ ಭಾಗಿಯಾಗಿದ್ದರು. ಆದರೆ ಈ ಬಾರಿ ಸಿದ್ದರಾಮಯ್ಯ ಬರುತ್ತಾರೆ ಎನ್ನಲಾಗುತ್ತಿದ್ದರೂ ಕೊನೆಯ ದಿನಗಳಲ್ಲಿ ಅವರು ಬರುವುದು ರದ್ದಾಯಿತು. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಕೂಡ ಗಜಪಯಣ ಕಾರ್ಯಕ್ರಮದಲ್ಲಿ ಭಾಗಿಯಾದ್ದರಿಂದ ಸಾಮೂಹಿಕ ವಿವಾಹಕ್ಕೆ ಗೈರಾದರು.
ಈ ಹಿನ್ನೆಲೆಯಲ್ಲಿ ಹನೂರು ಶಾಸಕ ಎಂ.ಆರ್.ಮಂಜುನಾಥ್, ಕಾಡಾ ಅಧ್ಯಕ್ಷ ಮರಿಸ್ವಾಮಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದರು.