ಚಾಮರಾಜನಗರ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜಾರಿಗೊಳಿಸಿದ ಅನೇಕ ಯೋಜನೆಗಳನ್ನು ಕರ್ನಾಟಕ ಸರ್ಕಾರ ತಡೆಹಿಡಿದಿದೆ ಎಂದು ಬಿಜೆಪಿ ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾದ ಎಂ.ರುದ್ರೇಶ್ ಆರೋಪಿಸಿದರು.
ನರೇಂದ್ರಮೋದಿ ಅವರು ರೈತರಿಗೆ ಏನೂ ಮಾಡಿಲ್ಲ ಎಂದು ವಿರೋಧ ಪಕ್ಷದವರು ಹೇಳುತ್ತಾರೆ. ಆದರೆ, ಕಳೆದ ೧೦ ವರ್ಷಗಳ ಅವಧಿಯಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಸಮರ್ಥಿಸಿಕೊಂಡರು.
ಪಿಎಂ ಕಿಸಾನ್ ಸವ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ ರೈತರಿಗೆ ವರ್ಷಕ್ಕೆ ೬ ಸಾವಿರ ರೂ. ನೀಡುತ್ತದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ೪ ಸಾವಿರ ಸೇರಿಸಿ ಒಟ್ಟು ೧೦ ಸಾವಿರ ಸಿಗುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ೪ ಸಾವಿರ ಅನ್ನು ನಿಲ್ಲಿಸಿದೆ. ಅಲ್ಲದೇ ಹಾಲಿಗೆ ನೀಡುತ್ತಿದ್ದ ಪ್ರೋತ್ಸಾಹದನ ಕೂಡ ನಿಲ್ಲಿಸಲಾಗಿದೆ ಎಂದು ದೂರಿದರು.
ರೈತರು ತಮ್ಮ ಜಮೀನುಗಳಲ್ಲಿ ಟ್ರಾನ್ಸ್ ಫಾರ್ಮರ್ ಹಾಕಿಸಿಕೊಳ್ಳಲು ಈ ಹಿಂದೆ ೨೫ ಸಾವಿರ ರೂ.ಗಳನ್ನು ಸೆಸ್ಕಾಂಗೆ ಪಾವತಿಸಬೇಕಿತ್ತು. ಆದರೆ, ಈಗ ೧.೫೦ ಲಕ್ಷ ರೂ. ಕಟ್ಟಬೇಕಿದೆ. ಜೊತೆಗೆ ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ. ಇದರಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಆರೋಪಿಸಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಾರತ ಮುಸ್ಲಿಂ ರಾಷ್ಟ್ರವಾಗಲಿದೆ. ಹಿಂದೂಗಳ ಮತ್ತು ದೇಶದ ರಕ್ಷಣೆಗಾಗಿ ಮತದಾರರು ಬಿಜೆಪಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಎನ್‌ರಿಚ್ ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಮುಖಂಡರಾದ ಹನುಮಂತಶೆಟ್ಟಿ, ಬಸವಣ್ಣ, ಮಲ್ಲೇಶ್, ಕಾಡಹಳ್ಳಿ ಕುವಾರ್ ಹಾಜರಿದ್ದರು.





