ಹನೂರು: ಕಾವೇರಿ ಹಾಗೂ ಕಪಿಲಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಪ್ರವಾಸಿಗರ ಹಿತದೃಷ್ಟಿಯಿಂದ ಹೊಗೇನಕಲ್ ಜಲಪಾತ ವ್ಯಾಪ್ತಿಯಲ್ಲಿ ದೋಣಿ ವಿಹಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕಪಿಲಾ ಹಾಗೂ ಕಾವೇರಿ ನದಿ ನೀರಿನ ಹರಿವು ಹೆಚ್ಚಾಗಿದ್ದು, ಹೊಗೇನಕಲ್ ಪಾಲ್ಸ್ ಮೈದುಂಬಿಕೊಂಡು ಎಲ್ಲರ ಕಣ್ಮನ ಸೆಳೆಯುತ್ತಿದೆ. ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿರುವುದನ್ನು ಅರಿತ ಅರಣ್ಯ ಇಲಾಖೆ ಹೊಗೇನಕಲ್ ಪಾಲ್ಸ್‌ನಲ್ಲಿ ತೆಪ್ಪಗಳನ್ನು ಇಳಿಸದಂತೆ ಖಡಕ್ ಸೂಚನೆ ನೀಡಿದೆ.
ಹೊಗೇನಕಲ್‌ನಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಪ್ರವಾಸಿಗರು ನೀರಿಗಿಳಿಯುವುದು ಸರ್ವೇ ಸಾಮಾನ್ಯ. ಈ ಹಿಂದೆ ತಮಿಳುನಾಡಿನ ಕುಟುಂಬವೊಂದು ಪಾಲ್ಸ್‌ಗೆ ಇಳಿದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.
ಈ ಘಟನೆಗಳು ಮರುಕಳಿಸಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ದೋಣಿ ವಿಹಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಮಳೆ ಕಡಿಮೆಯಾಗಿ ನೀರಿನ ಹರಿವು ಕಡಿಮೆಯಾಗುವವರೆಗೂ ದೋಣಿ ವಿಹಾರ ನಡೆಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಈ ಸೂಚನೆಯ ಪರಿಣಾಮ ಹೊಗೇನಕಲ್ ಪಾಲ್ಸ್‌ಗೆ ತೆರಳುವ ಪ್ರವಾಸಿಗರಿಗೆ ಕೊಂಚ ಬೇಸರವಾಗಿದೆ ಎನ್ನಲಾಗಿದೆ.