Mysore
31
scattered clouds

Social Media

ಭಾನುವಾರ, 01 ಮಾರ್ಚ್ 2026
Light
Dark

ಹನೂರು| ಶಿರಗೋಡು ಗ್ರಾಮದಲ್ಲಿ ಅದ್ಧೂರಿಯಾಗಿ ಜರುಗಿದ ಶ್ರೀ ಲಕ್ಷ್ಮೀ ವೆಂಕಟೇಶ್ವರ ರಥೋತ್ಸವ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ತಾಲೂಕಿನ ಶಿರಗೋಡು ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ರಥೋತ್ಸವ ಭಾನುವಾರ ಬೆಳಿಗ್ಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ದೇವಾಲಯದಲ್ಲಿ ಭಾನುವಾರ ರಥೋತ್ಸವದ ಅಂಗವಾಗಿ ತೇರಿಗೆ ವಿವಿಧ ಪಲ ಪುಷ್ಪಗಳಿಂದ ಅಲಂಕಾರಗೊಳಿಸಿ ಸ್ವಾಮಿಯ ವಿಗ್ರಹ ಮೂರ್ತಿ ಇಟ್ಟು ಪೂಜೆ ಸಲ್ಲಿಸಿದ ಬಳಿಕ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಲಾಯಿತು. ಈ ವೇಳೆ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿಯ ಭಕ್ತಾದಿಗಳು ಗೋವಿಂದಾ ಗೋವಿಂದಾ ನಾಮಸ್ಮರಣೆಯ ಮೂಲಕ ಮಹಾರಥೋತ್ಸವವನ್ನು ಕಣ್ತುಂಬಿಕೊಂಡರು. ರಥಕ್ಕೆ ಹಣ್ಣು ಜವನ, ದವಸ ಧಾನ್ಯ ಎಸೆದು ತಮ್ಮ ಹರಕೆ ತೀರಿಸಿದರು.

ಎರಡನೇ ಚಿಕ್ಕ ತಿರುಪತಿಯಂದೇ ಪ್ರಖ್ಯಾತಿ: ಹನೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರುವ ಶಿರಗೋಡು ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯ ತಾಲೂಕಿನ ಎರಡನೇ ಚಿಕ್ಕ ತಿರುಪತಿಯಂದೇ ಪ್ರಖ್ಯಾತಿ ಪಡೆದಿದ್ದು, ಪ್ರಧಾನ ಅರ್ಚಕ ರಾಮಕೃಷ್ಣ ಅವರ ನೇತೃತ್ವದಲ್ಲಿ ಬೆಳಗ್ಗಿನಿಂದ ದೇವಾಲಯದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಪದ್ಮಾವತಿಗೆ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ಸಲ್ಲಿಸಲಾಯಿತು.

ಭಕ್ತರ ದಂಡು: ಶ್ರೀ ಲಕ್ಷ್ಮಿ ವೆಂಕಟೇಶ್ವರ ರಥೋತ್ಸವಕ್ಕೆ ಹನೂರು ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಾದ ಲೊಕ್ಕನಹಳ್ಳಿ ಉದ್ದನೂರು, ಬೆಳ್ತೂರು, ಮಹಾಲಿಂಗನ ಕಟ್ಟೆ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಬೆಳಿಗ್ಗೆ 11.00 ರಿಂದ 12 ಗಂಟೆವರೆಗೆ ನಡೆದ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರು ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದು ಪುನೀತರಾದರು.

ಬಿಗಿ ಬಂದೋಬಸ್ತ್: ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ರಥೋತ್ಸವ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹನೂರು ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.

ಪ್ರಸಾದ ವಿತರಣೆ: ರಥೋತ್ಸವಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಮಜ್ಜಿಗೆ ಪಾನಕ ಅನ್ನದಾಸೋಹ ವ್ಯವಸ್ಥೆಯನ್ನು ದೇವಾಲಯ ಆಡಳಿತ ಮಂಡಳಿ ವತಿಯಿಂದ ಏರ್ಪಡಿಸಲಾಗಿತ್ತು. ಇದೇ ವೇಳೆ ಯುವ ಮುಖಂಡ ನವನೀತ್ ಗೌಡ ಹಾಗೂ ಆರ್ಚಕರಾದ ವಾಸು, ವಿಷ್ಣು, ಕದೀರ್ ವೇಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

 

Tags:
error: Content is protected !!