ಹನೂರು : ತಾಲ್ಲೂಕಿನಲ್ಲಿ ಸಂಭವಿಸಿದ ಪ್ರತ್ಯೇಕ ಎರಡು ಅಪಘಾತ ಪ್ರಕರಣಗಳಲ್ಲಿ ಮೂವರು ಮೃತಪಟ್ಟಿದ್ದಾರೆ.
ತಾಲ್ಲೂಕಿನ ತಾಳಬೆಟ್ಟ-ಕೋಣನಕೆರೆ ಮಾರ್ಗಮಧ್ಯೆ ಸಾರಿಗೆ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಇಬ್ಬರು ಕಾಲೇಜು ವಿದ್ಯಾರ್ಥಿಗಳು ಮೃತಪಟ್ಟರೆ, ಹಳೇ ಮಾರ್ಟಳ್ಳಿ ಗ್ರಾಮದಲ್ಲಿ ಬೈಕ್ ಡಿಕ್ಕಿಯಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ತಾಳಬೆಟ್ಟದ ಮಾರ್ಗದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅಂತಿಮ ಬಿಬಿಎಂ ಶಿಕ್ಷಣ ಪಡೆಯುತ್ತಿದ್ದ ಬೆಂಗಳೂರಿನ ಮಾಗಡಿ ರಸ್ತೆ ನಿವಾಸಿ ಪ್ರದೀಪ್ (೨೦), ನೆಲಮಂಗಲದ ಭಾವೀಶ್ (೨೧) ಮೃತಪಟ್ಟಿದ್ದಾರೆ. ಹಳೇ ಮಾರ್ಟಳ್ಳಿಯಲ್ಲಿ ನಡೆದ ಅಪಘಾತದಲ್ಲಿ ಜೂಲಿ (೪೦) ಎಂಬವರು ಸಾವಿಗೀಡಾಗಿದ್ದಾರೆ.
ಪ್ರದೀಪ್ ಹಾಗೂ ಭಾವೀಶ್ ಇಬ್ಬರು ಮ.ಬೆಟ್ಟಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು. ಎದುರಿನಿಂದ ಬಂದ ಸಾರಿಗೆ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಪ್ರದೀಪ್ ಸ್ಥಳದಲ್ಲಿಯೇ ಮೃತಪಟ್ಟರೆ, ಗಾಯಗೊಂಡಿದ್ದ ಭಾವೀಶ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಹಳೇ ಮಾರ್ಟಳ್ಳಿಯ ಚರ್ಚ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಮುಗಿಸಿ ನಡೆದುಕೊಂಡು ಮನೆಗೆ ತೆರಳುತ್ತಿದ್ದ ಜೂಲಿ ಅವರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಗಾಯಗೊಂಡ ಅವರನ್ನು ತುರ್ತು ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ರಾಮಾಪುರ ಪೊಲೀಸ್ ಠಾಣೆಯಲ್ಲಿ ಎರಡೂ ಪ್ರಕರಣಗಳು ದಾಖಲಾಗಿವೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಇನ್ಸ್‌ಪೆಕ್ಟರ್ ಚಿಕ್ಕರಾಜಶೆಟ್ಟಿ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.





