ಹನೂರು: ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ರಾಮಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹನೂರು ತಾಲೂಕಿನ ರಾಮಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುತ್ತುಶೆಟ್ಟಿಯೂರು ಗ್ರಾಮದ ಸೇಟು, ವಿಜಯ್ ಅಲಿಯಾಸ್ ವಿಜಿ ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ.
ಘಟನೆ ವಿವರ: ರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಜ್ಜೀಪುರ ಗ್ರಾಮದ ಕಡೆಯಿಂದ ಮಂಚಾಪುರ ಗ್ರಾಮದ ಹೊರವಲಯದಲ್ಲಿನ ಉಡುತೊರೆ ಜಲಾಶಯದ ಚಾನೆಲ್ ರಸ್ತೆ ಮಾರ್ಗವಾಗಿ ರಾಮಾಪುರ ಗ್ರಾಮದ ಕಡೆಗೆ ದ್ವಿಚಕ್ರ ವಾಹನದಲ್ಲಿ ಶ್ರೀಗಂಧದ ತುಂಡುಗಳನ್ನು ಆರೋಪಿಗಳು ಸಾಗಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಉಪವಿಭಾಗದ ಡಿವೈಎಸ್ಪಿ ಧರ್ಮೇಂದ್ರ ಹಾಗೂ ಪ್ರಭಾರ ಇನ್ಸ್ಪೆಕ್ಟರ್ ಶಶಿಕುಮಾರ್ ಅವರ ಮಾರ್ಗದರ್ಶನದಲ್ಲಿ ರಾಮಾಪುರ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಸಬ್ ಇನ್ಸ್ಪೆಕ್ಟರ್ ಈಶ್ವರ್, ಅಪರಾಧ ವಿಭಾಗದ ಲೋಕೇಶ್ ರವರು ದಾಳಿ ನಡೆಸಿ ಸ್ಕೂಟಿ ಮಾದರಿಯ ಮೊಫೆಡ್ ಮೋಟಾರ್ ಬೈಕ್ ನಲ್ಲಿ ಸಾಗಾಟ ಮಾಡುತ್ತಿದ್ದ 75,000 ಸಾವಿರ ಮೌಲ್ಯದ 15 ಕೆಜಿ 30 ಗ್ರಾಂ ಶ್ರೀಗಂಧದ 36 ತುಂಡುಗಳು, 350 ಗ್ರಾಂ ತೂಕದ ಶ್ರೀಗಂಧದ ಚೆಕ್ಕೆಗಳನ್ನು ಮಾಲು ಸಮೇತ ವಶಕ್ಕೆ ಪಡೆದುಕೊಂಡು, ಪ್ರಕರಣ ದಾಖಲಿಸಿದ್ದಾರೆ.
ದಾಳಿಯಲ್ಲಿ ಮುಖ್ಯಪೇದೆ ಸಿದ್ದೇಶ್ ಕುಮಾರ್, ಲಿಯಾಖತ್ ಅಲಿಖಾನ್, ಮಹೇಂದ್ರ, ಗಿರೀಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.