Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಹನೂರು ನಿವಾಸಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವಂತೆ ಶಾಸಕ ಎಂ.ಆರ್.ಮಂಜುನಾಥ್‌ ಸೂಚನೆ

ಹನೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯ 13 ವಾರ್ಡ್‌ಗಳ ನಿವಾಸಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕು ಎಂದು ಶಾಸಕ ಎಂಆರ್ ಮಂಜುನಾಥ್ ಅವರು, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹನೂರು ಪಟ್ಟಣದ ಲೋಕೋಪಯೋಗಿ ವಸತಿಗೃಹದ ಸಮೀಪದ ಓವರ್ ಹೆಡ್ ಟ್ಯಾಂಕ್, ಪಶು ಆಸ್ಪತ್ರೆ ಮುಂಭಾಗದ ಟ್ಯಾಂಕ್, ಹುಲಸುಗುಡ್ಡೆ ಬೋರೆ ಸಮೀಪದ ಕಾವೇರಿ ನೀರು ಸಂಗ್ರಹಣ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಎಂ.ಆರ್.ಮಂಜುನಾಥ್‌ ಅವರು, ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹನೂರು ಪಟ್ಟಣದ ವಿವಿಧ ವಾರ್ಡ್ಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ವಾಟರ್ ಟ್ಯಾಂಕ್ ಸಮೀಪದ ಗೇಟ್ ವಾಲ್‌ಗಳಲ್ಲಿ ನೀರು ಪೋಲಾಗುತ್ತಿದ್ದು, ಕಸ ಕಡ್ಡಿಗಳು ತುಂಬಿ ಅನೈರ್ಮಲ್ಯದಿಂದ ಕೂಡಿದೆ. ಗೇಟ್ ವಾಲ್ಗಳು ತಳಮಟ್ಟದಲ್ಲಿ ಇರುವುದರಿಂದ ಮಳೆಯ ನೀರಿಗೆ ಕೊಳಚೆ ನೀರು ಸಂಗ್ರಹವಾಗುತ್ತಿದೆ. ಕೂಡಲೇ ವಾಲ್‌ಗಳು ಭೂಮಿಯ ಮೇಲ್ಭಾಗದಲ್ಲಿ ಇರುವಂತೆ ಕ್ರಮ ಕೈಗೊಳ್ಳಬೇಕು ಎಂದರು. ಟ್ಯಾಂಕ್ ತಳಭಾಗದ ವಾಲ್‌ಗಳಲ್ಲಿ ಸ್ವಚ್ಛತೆ ಇಲ್ಲದೆ ಅವ್ಯವಸ್ಥೆ ಇರುವುದನ್ನು ಕಂಡ ಶಾಸಕರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಪಟ್ಟಣದ 13 ವಾರ್ಡಗಳಲ್ಲಿರುವ ಟ್ಯಾಂಕ್‌ಗಳನ್ನು ಮೂರು ದಿನಗಳಲ್ಲಿ ಸ್ವಚ್ಛ ಮಾಡಿ ನಿವಾಸಿಗಳಿಗೆ ಸಮರ್ಪಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪಟ್ಟಣ ವ್ಯಾಪ್ತಿಯ ಯಾವ ವಾರ್ಡ್ಗಳಲ್ಲಿ ಚರಂಡಿ, ರಸ್ತೆ ಇಲ್ಲದೇ ಇರುವ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕು. ಮೊದಲು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಾವು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ನಂತರ ನಾವು ಬೇರೆಯವರಿಗೆ ಸ್ವಚ್ಛತೆಯ ಪಾಠ ಮಾಡಬೇಕು. ನಾವೇ ಸ್ವಚ್ಛವಾಗಿಲ್ಲದಿದ್ದರೆ ಬೇರೆಯವರಿಗೆ ಏನನ್ನು ಹೇಳಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಆನಂದ್, ಸದಸ್ಯ ಟಿ.ಸೋಮಶೇಖರ್, ಮುಖ್ಯಾಧಿಕಾರಿ ಅಶೋಕ್, ಮುಖಂಡರುಗಳಾದ ರಾಜುಗೌಡ, ಸತೀಶ್ ಮಹಾದೇವ, ವಿಜಯಕುಮಾರ್, ಅಮೀನ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Tags: