ಗುಂಡ್ಲುಪೇಟೆ: ಕೆಲಸದ ಒತ್ತಡದಿಂದ ಅರಣ್ಯ ಇಲಾಖೆ ದಿನಗೂಲಿ ನೌಕರ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಕಚೇರಿ ಮುಂದೆಯೇ ಶವವಿಟ್ಟು ಪ್ರತಿಭಟನೆ ನಡೆಸಿರುವ ಘಟನೆ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ.
ತಾಲ್ಲೂಕಿನ ಗೋಪಾಲಪುರ ಗ್ರಾಮದ ಮಹೇಶ್‌ಗೆ (53 ) ಬ್ರೈನ್ ಸ್ಟ್ರೋಕ್ ಸಂಭವಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಅಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟ ಹಿನ್ನೆಲೆಯಲ್ಲಿ ಮೃತ ಮಹೇಶ್ ಕುಟುಂಬಸ್ಥರು ಹಾಗೂ ಗೋಪಾಲಪುರ ಗ್ರಾಮಸ್ಥರು ಮೃತ ಮಹೇಶ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡುವಂತೆ ಪ್ರತಿಭಟನೆ ನಡೆಸಿದರು.
ಮೃತ ಮಹೇಶ್ ಬಂಡೀಪುರ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರನಾಗಿ ಕಳೆದ 28 ವರ್ಷಗಳಿಂದ ಕೆಲಸ ನಿರ್ವಹಿಸುತಿದ್ದರು. ಮೃತನಿಗೆ ಪತ್ನಿ, ಒಬ್ಬ ಹೆಣ್ಣು ಮಗಳಿದ್ದು ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ನೌಕರಿ ನಿಡುವಂತೆ ಮದ್ದೂರು ಚೆಕ್ ಪೋಸ್ಟ್ ಬಳಿ ಮೃತ ಮಹೇಶ್ ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆಯಲ್ಲಿ 28 ವರ್ಷ ದಿನಗೂಲಿ ನೌಕರನಾಗಿದ್ದರೂ ನೌಕರಿ ಖಾಯಂ ಮಾಡಿಲ್ಲ. ಮೃತರಿಗೆ ಪರಿಹಾರ ಕೊಡಲು ಬರುವುದಿಲ್ಲ ಹಾಗೂ ಪಿಎಫ್ ಇಲ್ಲ ಎಂದರೆ ಕುಟುಂಬದವರು ಹೇಗೆ ಬದುಕುವುದು ಎಂದು ಅರಣ್ಯ ಇಲಾಖೆ ವಿರುದ್ಧ ಕಿಡಿಕಾರಿದ್ದು, ಪರಿಹಾರ ಹಾಗೂ ಕೆಲಸ ಕೊಡುವವರೆಗೂ ಪ್ರತಿಭಟನೆ ಮುಂದುವರೆಸುವ ಎಚ್ಚರಿಕೆ ನೀಡಿದರು.





