ಮಹಾದೇಶ್ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು
ಹನೂರು: ಗುಂಡ್ಲುಪೇಟೆ ತಾಲೂಕಿನ ನಂಜದೇವನಪುರ ಗ್ರಾಮ ಸುತ್ತಮುತ್ತಲು ಬೀಡುಬಿಟ್ಟಿದ್ದ ಎರಡು ಹುಲಿ ಮರಿಗಳನ್ನು ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಗೆ ತಂದು ಬಿಡುತ್ತಿದ್ದಾರೆ ಎಂದು ಆರೋಪಿಸಿ ಕೆರೆದಿಂಬ ಗೊಂಬೆಗಲ್ಲು ಗ್ರಾಮದ ಆದಿವಾಸಿ ಸಮುದಾಯದವರು ಪ್ರತಿಭಟನೆ ನಡೆಸಿದ್ದಾರೆ.
ಬಿಆರ್‌ಟಿ ಹುಲಿ ಸಂರಕ್ಷಿತ ವಿಭಾಗ ವ್ಯಾಪ್ತಿಯ ಚಾಮರಾಜನಗರ ತಾಲ್ಲೂಕಿನ ಹರವೆ ಹೋಬಳಿಯ ನಂಜದೇವನಪುರ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದು ತಾಯಿ ಹುಲಿ ಹಾಗೂ ನಾಲ್ಕು ಉಳಿ ಮರಿಗಳು ರೈತನ ಜಮೀನಿನಲ್ಲಿ ಕಾಣಿಸಿಕೊಂಡಿದ್ದವು. ಇದರಿಂದ ಆತಂಕಗೊಂಡಿದ್ದ ರೈತರು 5 ಹುಲಿಗಳನ್ನು ಹಿಡಿದು ಸ್ಥಳಾಂತರ ಮಾಡುವಂತೆ ಪ್ರತಿಭಟನೆ ನಡೆಸಿದ್ದರು.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಸಹ ಹುಲಿ ಸೆರೆಹಿಡಿಯುವ ಬಗ್ಗೆ ಸೂಚನೆ ನೀಡಿದ್ದರು.
ಅದರಂತೆ ಅರಣ್ಯ ಇಲಾಖೆಯವರು ವಿಶೇಷ ಕಾರ್ಯಾಚರಣೆಯ ಮೂಲಕ ಜನವರಿ 9ರಂದು ತಾಯಿಹುಲಿಯನ್ನು ಸೆರೆಹಿಡಿದಿದ್ದರು. ಉಳಿದಂತೆ ಜನವರಿ 15 ಹಾಗೂ 17ರಂದು ಒಂದು ಹೆಣ್ಣು ಹುಲಿಮರಿ ಒಂದು ಗಂಡು ಹುಲಿಮರಿಯನ್ನು ಸೆರೆ ಹಿಡಿದಿದ್ದರು. ಇನ್ನು ಎರಡು ಹುಲಿ ಮರಿಗಳು ಇದ್ದು, ಇವುಗಳನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಮುಂದುವರಿಸಿದ್ದರು.
ಈ ನಡುವೆ ಸೆರೆ ಹಿಡಿದಿದ್ದ ಎರಡು ಹುಲಿ ಮರಿಗಳನ್ನು ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ದೊಡ್ಡ ಸಂಪಿಗೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬೋನು ಇಟ್ಟಿದ್ದರು.
ಇದನ್ನು ಗಮನಿಸಿದ ಆದಿವಾಸಿ ಸಮುದಾಯದವರು ಬೇರೆ ಕಡೆಯಿಂದ ನಮ್ಮ ಭಾಗಕ್ಕೆ ಹುಲಿ ತಂದು ಬಿಡುವುದರಿಂದ ಅರಣ್ಯದ ಒಳಗೆ ವಾಸಿಸುವ ನಮಗೆ ತೊಂದರೆಯಾಗುತ್ತದೆ. ಈ ಕೂಡಲೇ ಈ ಹುಲಿಯನ್ನು ಬೇರೆ ಸ್ಥಳಾಂತರಿಸಬೇಕು ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಅರಣ್ಯ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನು ಮಾಧ್ಯಮದವರೊಂದಿಗೆ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ವಿಭಾಗದ ಪ್ರಭಾರ ಡಿಸಿಎಫ್ ಭಾಸ್ಕರ್ ಮಾತನಾಡಿ, ನಂಜದೇವನಪುರ ಸುತ್ತಮುತ್ತಲು ಹೋರಾಡುತ್ತಿದ್ದ ಹುಲಿಗಳ ಪೈಕಿ 2 ಹುಲಿ ಮರಿಗಳನ್ನು ಸಂರಕ್ಷಣೆ ಮಾಡಲಾಗುತ್ತಿದೆ. ಇನ್ನು ಪತ್ತೆಯಾಗದ ಎರಡು ಹುಲಿ ಮರಿಗಳನ್ನು ಸೆರೆಹಿಡಿದು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೇರೆಡೆಗೆ ಸ್ಥಳಾಂತರ ಮಾಡಲಾಗುವುದು. ಹುಲಿ ಮರಿಗಳಾಗಿರುವುದರಿಂದ ನೇರವಾಗಿ ಇದನ್ನು ಅರಣ್ಯಕ್ಕೆ ಬಿಡಲು ಸಾಧ್ಯವಿಲ್ಲ. ಹುಲಿ ಮರಿಗಳ ಸಂರಕ್ಷಣೆಗಾಗಿ ಫೋನಿನಲ್ಲಿ ಇಡಲಾಗಿದೆ ಎಂದು ಆಂದೋಲನದೊಂದಿಗೆ ಸ್ಪಷ್ಟಪಡಿಸಿದರು.




