Mysore
28
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಉಡುತೊರೆ ಜಲಾಶಯ ಭರ್ತಿಯಾದರೂ ನೀರು ಬಿಡದ ಅಧಿಕಾರಿಗಳ ವಿರುದ್ಧ ಪ್ರತಿಭಟನೆಗೆ ನಿರ್ಧಾರ

ಹನೂರು: ತಾಲೂಕಿನ ಉಡುತೊರೆ ಜಲಾಶಯ ಭರ್ತಿಯಾಗಿದ್ದರೂ ರೈತರ ಬೆಳೆಗಳಿಗೆ ನೀರು ಬಿಡದೆ ಇರುವುದನ್ನು ಖಂಡಿಸಿ ನವೆಂಬರ್ 4ರಂದು ಅಜ್ಜೀಪುರ ಗ್ರಾಮದ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ದಾದ್ ಖಾನ್ ತಿಳಿಸಿದರು.

ಹನೂರು ಪಟ್ಟಣದ ಲೋಕೋಪಯೋಗಿ ವಸತಿಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರ ಅಜ್ಜೀಪುರ, ರಾಮಾಪುರ, ಕೌದಳ್ಳಿ, ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಅನುಕೂಲ ಕಲ್ಪಿಸಲು ಕೊಟ್ಯಾಂತರ ರೂಪಾಯಿ ವೆಚ್ಚ ಮಾಡಿ ಉಡುತೊರೆ ಜಲಾಶಯ ನಿರ್ಮಾಣ ಮಾಡಿದೆ. ಕಳೆದ ಎರಡು ವರ್ಷಗಳ ಕಾಲ ಸತತ ಬರಗಾಲವಿದ್ದರಿಂದ ರೈತರು ತೀವ್ರ ತೊಂದರೆ ಅನುಭವಿಸಿದ್ದರು. ವರುಣನ ಕೃಪೆಯಿಂದ ಕಳೆದ ಒಂದು ತಿಂಗಳಿನಿಂದ ಸತತ ಮಳೆಯಾಗುತ್ತಿರುವ ಹಿನ್ನೆಲೆ ಡ್ಯಾಮ್ ಭರ್ತಿಯಾಗುತ್ತಿದೆ. ಆದರೆ ಕಸ ಕಡ್ಡಿಗಳು ಗಿಡಗಂಟಿಗಳು ಬೆಳೆದಿರುವುದರಿಂದ ಕೊನೆಯ ಭಾಗದವರೆಗೆ ಜಲಾಶಯ ನೀರು ತಲುಪುತ್ತಿಲ್ಲ ಈ ಸಂಬಂಧ ಅಧಿಕಾರಿಗಳಿಗೆ ಮುಖ್ಯ ಕಾಲುವೆ ದುರಸ್ತಿ ಪಡಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಈ ನಿಟ್ಟಿನಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ ಖಂಡಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಸಂಚಾಲಕ ಶೈಲೇಂದ್ರ ಮಾತನಾಡಿ ಅರಣ್ಯ ಇಲಾಖೆ ಮಲೆ ಮಹದೇಶ್ವರ ಬೆಟ್ಟ, ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಗಳ ಗ್ರಾಮಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕಿದೆ ಆದರೆ ಇದುವರೆಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿಲ್ಲ, ಸರ್ಕಾರದ ಕಾನೂನನ್ನೇ ಉಲ್ಲಂಘನೆ ಮಾಡಿರುವ ಹಿರಿಯ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಇನ್ನು ಸ್ವತಂತ್ರ ಪೂರ್ವದಲ್ಲಿ ಗ್ರಾಮ ಪಂಚಾಯಿತಿಗಳ ಗ್ರಾಮ ಠಾಣೆಯನ್ನು ನಿಗದಿ ಮಾಡಲಾಗಿದೆ. ಸರ್ಕಾರ ಹೊಸದಾಗಿ ಗ್ರಾಮ ಠಾಣೆ ಸರ್ವೆ ಮಾಡುವಂತೆ ಸೂಚನೆ ನೀಡಿದ್ದರೂ ಇದುವರೆಗೂ ಸರ್ವೆ ಮಾಡದೆ ಇರುವುದರಿಂದ ನಿವಾಸಿಗಳಿಗೆ ತೊಂದರೆಯಾಗಿದೆ. ಈ ಹಿನ್ನೆಲೆ ಈ ಕೂಡಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊಸದಾಗಿ ಸರ್ವೆ ಮಾಡಿಸಿ ಸ್ಥಳೀಯ ನಿವಾಸಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆ ಹೋಗುವವರಿಗೆ ಅರಣ್ಯ ಇಲಾಖೆ ವತಿಯಿಂದ 200 ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರೆ. ಕಾಡಂಚಿನ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಅರಣ್ಯ ಇಲಾಖೆಯವರು ತೊಂದರೆ ಕೊಡುತ್ತಿದ್ದಾರೆ. ಆದರೆ ಚಾರಣದ ಹೆಸರಿನಲ್ಲಿ ಜನರಿಂದ ಹಣ ವಸೂಲಿ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ? ಸಾರ್ವಜನಿಕರಿಂದ ಹಣ ವಸೂಲಿ ಮಾಡಿ ಏನು ಸಾಧನೆ ಮಾಡಬೇಕು. ಈ ಕೂಡಲೇ ಸಂಬಂಧಪಟ್ಟ ಅರಣ್ಯ ಸಚಿವರು ಈ ಆದೇಶವನ್ನು ಹಿಂಪಡೆಯಬೇಕು, ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯವರು ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವವರಿಂದ ಹಣ ವಸೂಲಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ, ಈ ನಿಟ್ಟಿನಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ಶಾಸಕರು ಸಹ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ನಡೆಸಿ ಅರಣ್ಯ ಇಲಾಖೆ ವತಿಯಿಂದ ಹಣ ಪಡೆಯುತ್ತಿರುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.

ಜಲಾಶಯದಿಂದ ನೀರು ಬಿಡಲು ಶಾಸಕರ ಅನುಮತಿ ಬೇಕೆ?
ರೈತರ ಅನುಕೂಲಕ್ಕಾಗಿ ಉಡುತೊರೆ ಹಳ್ಳ ಜಲಾಶಯ ನಿರ್ಮಾಣ ಮಾಡಲಾಗಿದೆ. ರೈತರ ಬೆಳೆಗಳಿಗೆ ಅವಶ್ಯಕತೆ ಇದ್ದಾಗ ಜಲಾಶಯದಿಂದ ನೀರು ಬಿಡಬೇಕು. ಆದರೆ ಜಲಾಶಯದಿಂದ ನೀರು ಬಿಡಿಸಿಕೊಳ್ಳಲು ಸ್ಥಳೀಯ ಶಾಸಕರ ಅನುಮತಿ ಪಡೆಯಬೇಕೆಂದು ಯಾವ ನಿಯಮದಲ್ಲಿದೆ. ರೈತರು ಬೆಳೆಗಳು ಒಣಗುತ್ತಿದ್ದಾಗ ಜಲಾಶಯದಿಂದ ನೀರು ಬಿಡಬೇಕು ಆದರೆ ಇವರು ಅನುಮತಿ ಪಡೆದು ನೀರು ಬಿಡುವವರೆಗೆ ಬೆಳೆ ಸಂಪೂರ್ಣ ನಿಲಕಚ್ಚಿರುತ್ತದೆ. ಆದ್ದರಿಂದ ರೈತರ ಅನುಕೂಲಕ್ಕೆ ತಕ್ಕಂತೆ ನೀರು ಬಿಡಬೇಕು ಎಂದು ತಾಲೂಕು ಉಪಾಧ್ಯಕ್ಷ ಪಳನಿಸ್ವಾಮಿ ಒತ್ತಾಯಿಸಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಗೌರವಾಧ್ಯಕ್ಷ ರಾಜಣ್ಣ, ಗ್ರಾಮ ಘಟಕಗಳ ಅಧ್ಯಕ್ಷರುಗಳಾದ ಅರ್ಪುದರಾಜ್, ಡೇವಿಡ್ ,ತಂಗವೇಲು, ಮಹಿಳಾ ಘಟಕದ ಅಧ್ಯಕ್ಷೆ ಪೊಂಗೋಡಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Tags: