ಹನೂರು: ಹನೂರು ತಾಲ್ಲೂಕಿನ ಕೆಂಪಯ್ಯನಹಟ್ಟಿ ಗ್ರಾಮದ ಪಟ್ಟಲದಮ್ಮ ದೇವಸ್ಥಾನಕ್ಕೆ ಮಾಜಿ ಶಾಸಕ ಆರ್.ನರೇಂದ್ರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಈ ದೇವಸ್ಥಾನದಲ್ಲಿ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಕುಂಭಾಭಿಷೇಕ ಸೇರಿದಂತೆ ವಿಶೇಷ ಪೂಜೆ ನಡೆಯುತ್ತದೆ.
ಆಧುನಿಕ ಜಗತ್ತಿನಲ್ಲಿ ನಾವು ಎಷ್ಟೇ ವೇಗವಾಗಿ ಬೆಳೆಯುತ್ತಿದ್ದರೂ, ಧಾರ್ಮಿಕವಾಗಿ ದೇವಸ್ಥಾನಗಳನ್ನು ನಿರ್ಮಾಣ ಮಾಡಿ ಶಾಂತಿ, ನೆಮ್ಮದಿ ಕಂಡುಕೊಳ್ಳುತ್ತಿದ್ದೇವೆ.
ಪ್ರತಿಯೊಂದು ಗ್ರಾಮಗಳಲ್ಲಿ ಕನಿಷ್ಠ ಮೂರರಿಂದ ನಾಲ್ಕು ದೇವಸ್ಥಾನಗಳಿವೆ. ಪ್ರತಿಯೊಬ್ಬರು ಒಂದೊಂದು ದೇವರ ಮೇಲೆ ನಂಬಿಕೆಯಿಟ್ಟು ಪೂಜೆ ಮಾಡುತ್ತಾರೆ.
ಹನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಸಮಾಜದವರಿದ್ದು, ಎಲ್ಲರೂ ಒಗ್ಗಟ್ಟಾಗಿ ಪ್ರತಿಯೊಂದು ದೇವರುಗಳನ್ನು ಪೂಜೆ ಮಾಡುತ್ತಾರೆ.
ನಾನು ಶಾಸಕನಾಗಿದ್ದಾಗ ಹಲವಾರು ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ. ಮುಂದೆಯೂ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತೇನೆ ಎಂದರು.
ಈ ವೇಳೆ ಹನೂರು ಪಟ್ಟಣ ಪಂಚಾಯಿತಿ ಸದಸ್ಯ ಗಿರೀಶ್, ಕೌದಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರಾಜು, ವಾಜಿದ್, ಶಿವಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.





