ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಪುನರಾರಂಭಿಸುವ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸ್ಥಳೀಯ ಪದಾಧಿಕಾರಿಗಳು ತಾಲೂಕಿನ 25ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಸಾಮೂಹಿಕ ಮನವಿ ಸಲ್ಲಿಸಿದ್ದಾರೆ.
ಸಫಾರಿ ಪರಿಸರ ವಿರೋಧಿ ಎಂದು ಆಕ್ಷೇಪಿಸಿರುವ ರೈತ ಮುಖಂಡರು, “ಸಫಾರಿ ಪುನರಾರಂಭ ಮಾಡಬಾರದು” ಎಂದು ಒತ್ತಾಯಿಸಿ ಸರ್ಕಾರ ಕೂಡಲೇ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದ್ದಾರೆ.
ತಾಲೂಕಿನ ಹಂಗಳ ಹೋಬಳಿಯ ಕನ್ನೇಗಾಲ, ಹುಂಡೀಪುರ, ಶಿವಪುರ, ಬೊಮ್ಮಲಾಪುರ, ಮಂಗಲ, ಬೇರಂಬಾಡಿ, ತೆರಕಣಾಂಬಿ ಹೋಬಳಿ ವ್ಯಾಪ್ತಿಯ ಕೊಡಸೋಗೆ, ಕೆಲಸೂರು, ಬೊಮ್ಮನಹಳ್ಳಿ, ವಡ್ಡಗೆರೆ, ಶಿಂಡನಪುರ, ಕುಂದಕೆರೆ ಬೇಗೂರು ಹೋಬಳಿಗೆ ಬರುವ ಕೋಟೆಕೆರೆ, ರಾಘವಾಪುರ, ಹೊರೆಯಾಲ, ನಿಟ್ರೆ, ಮಾದಾಪಟ್ಟಣ, ಆಲತ್ತೂರು, ಕಬ್ಬಹಳ್ಳಿ ಹಾಗೂ ಕಸಬಾ ಹೋಬಳಿಯ ಭೀಮನಬೀಡು, ಕೂತನೂರು, ಮಡಹಳ್ಳಿ, ಬರಗಿ, ಮೂಖಹಳ್ಳಿ, ಅಣ್ಣೂರುಕೇರಿ, ವೀರನಪುರ ಗ್ರಾಮ ಪಂಚಾಯಿತಿಗಳ ಪಿಡಿಒಗಳಿಗೆ ಮನವಿ ಸಲ್ಲಿಸಿದ್ದಾರೆ.
ರೈತ ಮುಖಂಡರು ಹೇಳಿದ್ದು…
“ಸಫಾರಿ ವೀಕ್ಷಣೆಗೆ ಹೆಚ್ಚಿನ ಮಂದಿ ಹೊರಗಿನವರು ಬರುತ್ತಾರೆ. ಆದರೆ ಸಫಾರಿಯಿಂದ ರೈತರು ಮತ್ತು ಜಾನುವಾರುಗಳಿಗೆ ತೊಂದರೆಯಾಗುತ್ತಿದೆ. ಕಾಡಿನೊಳಗೆ ಬಸ್ ಹಾಗೂ ಜೀಪ್‌ಗಳ ಸಂಚಾರದಿಂದ ವಾಯು ಮಾಲಿನ್ಯವಾಗುತ್ತದೆ. ಸ್ವಚ್ಛಂದವಾಗಿ ಓಡಾಡುವ ಪ್ರಾಣಿಗಳಿಗೆ ತೊಂದರೆಯಾಗುತ್ತದೆ. ಮನುಷ್ಯನನ್ನು ನೋಡಿ ಪ್ರಾಣಿಗಳು ಗಾಬರಿಗೊಂಡು ಓಡಿಹೋಗುತ್ತವೆ. ಕಾಡು ಕಾಡಾಗೇ ಇರಬೇಕು. ಮಾನವನ ಹಸ್ತಕ್ಷೇಪ ಇರಬಾರದು. ಸಫಾರಿಯಿಂದ ಕಾಡಿನ ಅಸಮತೋಲನವಾಗುತ್ತದೆ.”
ಇನ್ನೂ ಮುಂದುವರಿಸಿ ಮಾತನಾಡಿ, “ಭ್ರಷ್ಟ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಹಣ ಮಾಡಲು ಅರಣ್ಯದೊಳಗೆ ಅತಿಕ್ರಮಣ ಮಾಡಿ ರೆಸಾರ್ಟ್, ಬಾರ್‌ಗಳನ್ನು ಮಾಡಿಕೊಂಡಿದ್ದಾರೆ. ಕಾಡು ಎಲ್ಲರ ಸ್ವತ್ತಾಗಿರುವ ಕಾರಣ ರೈತರ ಅಭಿಪ್ರಾಯ ಪಡೆದುಕೊಳ್ಳಬೇಕು. ಕಾಡನ್ನು ಉಳಿಸುವವರು ರೈತರು ಹಾಗೂ ಗಿರಿಜನರೇ ಹೊರತು, ಯಾವುದೇ ಇಲಾಖೆಯವರಲ್ಲ. ಕಾಡಿನೊಳಗೆ ಇರುವ ಎಲ್ಲಾ ರೆಸಾರ್ಟ್, ಹೋಮ್‌ಸ್ಟೇಗಳ ಒತ್ತುವರಿ ಮಾಡಿಕೊಂಡಿರುವ ಜಮೀನುಗಳನ್ನು ತಕ್ಷಣ ಸರ್ಕಾರ ವಶಪಡಿಸಿಕೊಳ್ಳಬೇಕು. ಪ್ರವಾಸೋದ್ಯಮಕ್ಕೆ ಬೇರೆ ದಾರಿಗಳಿಗೆ. ಕಾಡಿನೊಳಗೆ ಪ್ರವಾಸೋದ್ಯಮ ಸಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ಸಫಾರಿ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.
ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿವಿಧ ಗ್ರಾಮ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ರೈತ ಮುಖಂಡರು ಈ ಮನವಿ ಸಲ್ಲಿಕೆ ವೇಳೆ ಹಾಜರಿದ್ದರು.
ಈ ಸಂಬಂಧ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮ ಪಂಚಾಯಿತಿ ಪಿಡಿಒಗೆ ವಿಶೇಷವಾಗಿ ಮನವಿ ಸಲ್ಲಿಸಲಾಗಿದೆ.




