ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು ಕೊಟ್ಟರೂ ಯಾರೂ ಬರುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ಹುಲಿ, ಆನೆ, ಚಿರತೆ ಸೇರಿದಂತೆ ಹಲವು ಪ್ರಾಣಿಗಳ ತಾಣವಾಗಿದೆ.
ಇಂತಹ ಪ್ರಸಿದ್ಧ ಅರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮದಲ್ಲೂ ಕೂಡ ಒಂದೊಂದು ಹುಲಿ ಸಂರಕ್ಷಿತಾರಣ್ಯದಲ್ಲಿ ಕೂಡ ವೈದ್ಯರಿರಬೇಕು ಎಂಬ ನಿಯಮವಿದೆ.
ಆದರೆ ಇಲ್ಲಿ ಕಳೆದ ಎಂಟು ತಿಂಗಳಿನಿಂದಲೂ ಪಶು ವೈದ್ಯರ ಸ್ಥಾನ ಖಾಲಿ ಇದೆ.
ಕಾಡಿನಲ್ಲಿ ಪ್ರಾಣಿಗಳು ಗಾಯಗೊಂಡರೆ ಆ ಪ್ರಾಣಿಗಳ ಮೇಲೆ ನಿಗಾ ವಹಿಸಿ ಸೂಕ್ತ ಚಿಕಿತ್ಸೆ ಕೊಡುವುದು ಇಲಾಖೆಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಾದರೂ ಕೂಡ ಅರಣ್ಯ ಪ್ರದೇಶಕ್ಕೆ ಪಶು ವೈದ್ಯರ ಅವಶ್ಯಕತೆಯಿದೆ.