Mysore
24
overcast clouds

Social Media

ಶುಕ್ರವಾರ, 04 ಏಪ್ರಿಲ 2025
Light
Dark

ರಸ್ತೆ, ವಾಹನ ಸೌಲಭ್ಯವಿಲ್ಲ: ಡೋಲಿಯಲ್ಲಿ ಅಸ್ವಸ್ತನನ್ನು ಸಾಗಿಸಿದ ಗ್ರಾಮಸ್ಥರು

ಮಹದೇಶ್ ಎಂ ಗೌಡ, ಹನೂರು

ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಳಸಿಕೆರೆ ಗ್ರಾಮದ ಪುಟ್ಟ ಎಂಬುವವರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ, ವಾಹನದ ವ್ಯವಸ್ಥೆ ಇಲ್ಲದೆ ಡೋಲಿಯ ಮುಖಾಂತರ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿರುವ ಘಟನೆ ಜರುಗಿದೆ.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಳಸಿಕೆರೆ ಗ್ರಾಮದ ಪುಟ್ಟ ಎಂಬುವರಿಗೆ ವಾಂತಿಭೇದಿ ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದರು. ಈ ಹಿನ್ನೆಲೆ ಸಂಬಂಧಿಕರ ನೆರವಿನಿಂದ ಡೋಲಿಯ ಮುಖಾಂತರ ಮಲೆ ಮಹದೇಶ್ವರ ಬೆಟ್ಟಕ್ಕೆ ಕರೆತಂದು ತಮಿಳುನಾಡಿನ ಕೊಳತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡದ ಹಿನ್ನೆಲೆ ಹಲವಾರು ಪ್ರತಿಭಟನೆಗಳು ನಡೆದಿದೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಗ್ರಾಮಸ್ಥರು ಮತಗಟ್ಟೆ ದ್ವಂಸ ಮಾಡುವಷ್ಟರ ಮಟ್ಟಿಗೆ ರೊಚ್ಚಿಗೆದ್ದಿದ್ದಾರೆ ಎಂದರೆ ಅವರಿಗೆ ಎಷ್ಟು ನೋವಿದೆ ಎಂಬುದು ತಿಳಿದು ಬರುತ್ತದೆ.

ಗ್ರಾಮಸ್ಥರಿಂದ ಪ್ರತಿಭಟನೆ:

ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಳಸಿಕೆರೆ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳಾದ ರಸ್ತೆ ಸಾರಿಗೆ ವ್ಯವಸ್ಥೆ ಕಲ್ಪಿಸಿ ಕೊಡುವಂತೆ ಗ್ರಾಮಸ್ಥರು ಮಲೆ ಮಹದೇಶ್ವರ ಬೆಟ್ಟ ಹಾಗೂ ತುಳಸಿಕೆರೆ ಗ್ರಾಮದ ರಸ್ತೆ ಮಾರ್ಗ ಮಧ್ಯದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆಂಪಣ್ಣ ಮಾತನಾಡಿ, ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದರೂ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ ಕೊಡುವಲ್ಲಿ ವಿಫಲರಾಗಿದ್ದಾರೆ. ನಾವು ವನ್ಯ ಪ್ರಾಣಿಗಳಂತೆ, ಪ್ರಾಣಿಗಳ ಜೊತೆಯೇ ” ಹಳ್ಳದ ನೀರು ಕೊಳ್ಳಿಯ ಬೆಳಕಿನಲ್ಲಿಯೇ” ಜೀವನ ನಡೆಸುತಿದ್ದೇವೆ. ನಾವು ಡಾ. ಬಿ.ಆರ್ ಅಂಬೇಡ್ಕರ್ ಅವರ ಸಂವಿಧಾನದಂತೆ ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆ ಆದರೆ ಇದುವರೆಗೆ ಸರ್ಕಾರಗಳು ನಮ್ಮ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ ಕೊಡುವಲ್ಲಿ ವಿಫಲರಾಗಿದ್ದಾರೆ. ಕಳೆದ ವರ್ಷ ಉತ್ತಮ ಮಳೆಯಾಗಿರುವುದರಿಂದ ರಸ್ತೆಯಲ್ಲಿನ ಮಣ್ಣು ಕೊಚ್ಚಿ ಹೋಗಿ ಕಲ್ಲುಗಳೆಲ್ಲ ಮೇಲೆ ಬಂದಿದೆ .ಈ ಸಂಬಂಧ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದರು ಇದುವರೆಗೂ ಯಾವುದೇ ರೀತಿ ಸ್ಪಂದಿಸಿಲ್ಲ ಇನ್ನು ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಚಿವರುಗಳ ಭರವಸೆ ಇನ್ನು ಈಡೇರಿಲ್ಲ: ಕಳೆದ ಲೋಕಸಭಾ ಚುನಾವಣೆಯಲ್ಲಿ ಇಂಡಿಗನತ್ತ ಮೆಂದಾರೆ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕು ಇಲ್ಲದಿದ್ದರೆ ಚುನಾವಣಾ ಬಹಿಷ್ಕಾರ ಮಾಡುವುದಾಗಿ ಇಂಡಿಗನತ್ತ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಅಧಿಕಾರಿಗಳು ಭರವಸೆ ನೀಡಿದರು ಯಾವುದೇ ಭರವಸೆಗಳು ಈಡೇರದ ಹಿನ್ನೆಲೆ ಮತದಾನ ಬಹಿಷ್ಕಾರ ಮಾಡಿದ್ದರು . ಆದರೆ ಮೆಂದಾರೆ ಗ್ರಾಮದವರು ಮತದಾನ ಮಾಡಲು ಆಗಮಿಸಿದ್ದ ಹಿನ್ನೆಲೆ ಇಂಡಿಗನತ್ತ ಗ್ರಾಮಸ್ಥರು ಮತಗಟ್ಟೆ ದ್ವಂಸ ಮಾಡಿದ್ದರು. ಈ ವೇಳೆ ನೂರಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಾಗಿ ಸುಮಾರು ದಿನಗಳ ಕಾಲ ಗ್ರಾಮವನ್ನೇ ತೊರೆದಿದ್ದರು. ಚುನಾವಣೆಯ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್ ಸಮಾಜ ಕಲ್ಯಾಣ ಇಲಾಖೆಯ ಸಚಿವ ಹೆಚ್ ಸಿ ಮಹದೇವಪ್ಪ ಮಾಜಿ ಶಾಸಕ ಆರ್ ನರೇಂದ್ರ ಇಂಡಿಗನತ ಗ್ರಾಮದಲ್ಲಿಯೇ ಜಿಲ್ಲಾಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಏಳು ತಿಂಗಳು ಪೂರ್ಣಗೊಂಡಿದ್ದರು ಇದುವರೆಗೂ ಅವರು ನೀಡಿದ್ದ ಭರವಸೆ ಹುಸಿಯಾಗಿದೆ.

ಡೋಲಿಯೇ ವಾಹನ: ಇನ್ನು ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಯಾವುದೇ ವ್ಯಕ್ತಿಗೆ ಅನಾರೋಗ್ಯ ಕಾಣಿಸಿಕೊಂಡರೆ ಕಳೆದ 60 ವರ್ಷಗಳಿಂದ ಡೋಲಿಯೇ ವಾಹನವಾಗಿದೆ. ಈ ಸಂಬಂಧ ಹಲವಾರು ಬಾರಿ ಮಾಧ್ಯಮಗಳಲ್ಲಿ ವರದಿಯಾಗಿದ್ದರು ಕ್ಷೇತ್ರದ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಜನಪ್ರತಿನಿಧಿಗಳು ಕೇವಲ ಚುನಾವಣೆಯಲ್ಲಿ ಗೆಲ್ಲಲು ಮಾತ್ರ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಇನ್ನು ಮುಂದಾದರೂ ಕಾಡಂಚಿನ ಗ್ರಾಮಗಳ ಜನರಿಗೆ ಮೂಲಭೂತ ಸೌಲಭ್ಯ ಒದಗಿಸಿಕೊಡುವ ಮೂಲಕ ಅನುಕೂಲ ಕಲ್ಪಿಸಿಕೊಡುವರೇ ಕಾದು ನೋಡಬೇಕಿದೆ.

ಕಾಡಂಚಿನ ಗ್ರಾಮಗಳ ಸಮಗ್ರ ವರದಿ: ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ದ್ವಂಸ ಪ್ರಕರಣದ ನಂತರ ಆಂದೋಲನ ದಿನಪತ್ರಿಕೆಯಲ್ಲಿ ಸುಮಾರು ಒಂದು ತಿಂಗಳುಗಳ ಕಾಲ ಇಂಡಿಗನತ್ತ, ಮೆಂದಾರೆ, ನಾಗಮಲೆ, ಕೊಂಬಡಿಕ್ಕಿ ಸೇರಿದಂತೆ ಇನ್ನಿತರ ಗ್ರಾಮಗಳ ವಾಸ್ತವತೆಯ ಸುದ್ದಿಯನ್ನು ಬಿತ್ತಾರ ಮಾಡಲಾಗಿತ್ತು. ಈ ವೇಳೆ ಜಿಲ್ಲಾಧಿಕಾರಿಗಳು ಆಂದೋಲನ ಸಂದರ್ಶನದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು ಆದರೆ ಹತ್ತು ತಿಂಗಳು ಕಳೆದರೂ ಅವರ ಭರವಸೆಯು ಇನ್ನೂ ಈಡೇರಿಲ್ಲ ಮುಂದಿನ ದಿನಗಳಲ್ಲಾದರೂ ಸಮಸ್ಯೆಗಳನ್ನು ಬಗೆಹರಿಸಲಿ ಎಂಬುವುದು ಆಂದೋಲನ ದಿನಪತ್ರಿಕೆಯ ಆಶಯವಾಗಿದೆ.

Tags: