ಚಾಮರಾಜನಗರ: ಹೈಕಮಾಂಡ್ ಹಾಗೂ ಶಾಸಕರ ಬೆಂಬಲ ಇರುವವರೆಗೂ ಸಿದ್ದರಾಮಯ್ಯನವರೇ ಸಿಎಂ ಎಂದು ಚಾಮರಾಜನಗರ ಸಂಸದ ಸುನೀಲ್ ಬೋಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆಯಾಗುತ್ತಿಲ್ಲ. ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಇನ್ನು ಮುಡಾ ಕೇಸ್‌ನಲ್ಲಿ ಕಾಂಗ್ರೆಸ್ ನಾಯಕರೇ ಅತೀ ಹೆಚ್ಚು ದಾಖಲೆ ಕೊಟ್ಟಿದ್ದಾರೆ ಎಂಬ ಸ್ನೇಹಮಯಿ ಕೃಷ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಸಿಎಂ ಆಗದಿದ್ದ ಅವಧಿಯಲ್ಲಿಯೇ ಅಧಿಕಾರಿಗಳು ಸೈಟ್ ಕೊಟ್ಟಿದ್ದಾರೆ. 14 ಸೈಟ್‌ಗಳ ಬಗ್ಗೆ ಎಷ್ಟು ದೊಡ್ಡ ಮಟ್ಟದ ಚರ್ಚೆಯಾಗಿದೆ. ಕಾಂತರಾಜು ಕಮಿಷನರ್ ಆಗಿದ್ದ ಅವಧಿಯಲ್ಲಿ 9 ಸಾವಿರ ಸೈಟ್‌ಗಳು ಎಲ್ಲೋದವು ಎಂದು ಪ್ರಶ್ನೆ ಮಾಡಿದರು. ಇದರ ಬಗ್ಗೆ ಯಾರೂ ಕೂಡ ಚರ್ಚೆ ಮಾಡುತ್ತಿಲ್ಲ. 14 ಸೈಟ್ ವಿಚಾರ ಮಾತ್ರ ಅತೀ ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.