Mysore
17
clear sky

Social Media

ಶುಕ್ರವಾರ, 30 ಜನವರಿ 2026
Light
Dark

ಕಸ ವಿಲೇವಾರಿಗೆ ನಿರ್ಲಕ್ಷ್ಯ: ಪಟ್ಟಣ ಪಂಚಾಯಿತಿ ಮುಂದೆ ಕಸ ಸುರಿದು ನಿವಾಸಿಗಳ ಆಕ್ರೋಶ

ಹನೂರು: ಹನೂರು ಪಟ್ಟಣದ ಪ್ರಮುಖ ಮುಖ್ಯ ರಸ್ತೆ ಹಾಗೂ ಬಡಾವಣೆಗಳಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡದೇ ಇರುವುದನ್ನು ಖಂಡಿಸಿ ಪಟ್ಟಣದ ನಿವಾಸಿಗಳು ಕಸವನ್ನು ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹನೂರು ಪಟ್ಟಣದ ಬಂಡಳ್ಳಿ ಮುಖ್ಯ ರಸ್ತೆ, ಕನ್ನಿಕಾ ಪರಮೇಶ್ವರಿ ರಸ್ತೆ, ದೊಡ್ಡಿಕೇರಿ ದೇವಾಲಯ ರಸ್ತೆ, ದೊಡ್ಡಿಕೇರಿ ಬೀದಿಗಳಲ್ಲಿ ಕಳೆದ ಒಂದು ವಾರದಿಂದ ಕಸ ವಿಲೇವಾರಿ ಆಗಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಲಲ್ಲಿ ಕಸ ಗಬ್ಬೆದ್ದು ನಾರುತ್ತಿದ್ದು, ಈ ಬಗ್ಗೆ ಸ್ಥಳೀಯ ಸದಸ್ಯ ಹಾಗೂ ಉಪಾಧ್ಯಕ್ಷ ಆನಂದ್‌ ಅವರಿಗೆ ಕಸ ವಿಲೇವಾರಿ ಮಾಡಿಸುವಂತೆ ಮನವಿ ಮಾಡಲಾಗಿದೆ.

ಅವರು ಸಹ ನಿವಾಸಿಗಳ ಮನವಿಗೆ ಸ್ಪಂದಿಸಿ, ಸ್ಥಳದಲ್ಲಿಯೇ ಮುಖ್ಯಾಧಿಕಾರಿ ಅಶೋಕ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಮೂರು ದಿನವಾದರೂ ಕಸ ವಿಲೇವಾರಿ ಮಾಡದೇ ಇರುವುದರಿಂದ ಬೇಸತ್ತ ದೊಡ್ಡಿಕೇರಿ ಬೀದಿ ನಿವಾಸಿಗಳು ಪಟ್ಟಣ ಪಂಚಾಯಿತಿ ಮುಂಭಾಗ ಕಸ ಸುರಿದು ಆಕ್ರೋಶ ಹೊರ ಹಾಕಿದರು.

ಈ ಸುದ್ದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಮುಖ್ಯಾಧಿಕಾರಿ ಸ್ಥಳೀಯ ಪಟ್ಟಣ ಪಂಚಾಯಿತಿ ಸದಸ್ಯರುಗಳಿಗೆ ದೂರವಾಣಿ ಕರೆ ಮಾಡಿ ಪೌರಕಾರ್ಮಿಕರನ್ನು ಮನವೊಲಿಸಿ ಕಸ ವಿಲೇವಾರಿ ಮಾಡಿಸುವಂತೆ ತಿಳಿಸಿದ್ದಾರೆ. ಸದಸ್ಯರುಗಳು ಪೌರಕಾರ್ಮಿಕರ ಮನವೊಲಿಸಿ ಕಸ ಸುರಿದ ಒಂದು ಗಂಟೆಯಲ್ಲಿ ಬಂಡಳ್ಳಿ ಮುಖ್ಯ ರಸ್ತೆಯಲ್ಲಿ ಮಾತ್ರ ಕಸ ವಿಲೇವಾರಿ ಮಾಡಿಸಿದ್ದಾರೆ.

ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ 13 ವಾರ್ಡ್‌ಗಳಲ್ಲಿ ಪ್ರತಿನಿತ್ಯ ಕಸ ವಿಲೇವಾರಿ ಮಾಡಲು ಒಂದು ಟ್ರ್ಯಾಕ್ಟರ್‌, ಮೂರು ಟಿಪ್ಪರ್‌ಗಳಿವೆ. ಈಗಾಗಲೇ ಒಂದು ಟಿಪ್ಪರ್‌ ದುರಸ್ತಿಗೆ ಬಿಟ್ಟು ವರ್ಷಗಳೇ ಕಳೆದಿವೆ. ಆದರೆ ಇನ್ನೂ ದುರಸ್ತಿ ಮಾಡಿಸದೇ ಇರುವುದರಿಂದ ಗುಜರಿಗೆ ಹಾಕಿಸುವ ಸನ್ನಿವೇಶ ಬಂದಿದೆ. ಇರುವ ಟಿಪ್ಪರ್‌ಗಳನ್ನು ನಿರ್ವಹಣೆ ಮಾಡದೇ ಇರುವುದರಿಂದ ಹೆಚ್ಚು ಕಸ ತುಂಬಲು ಸಾಧ್ಯವಾಗುತ್ತಿಲ್ಲ ಎಂದು ಚಾಲರೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 13 ವಾರ್ಡ್‌ಗಳಿದ್ದು ಸುಮಾರು 15 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಪಟ್ಟಣದ ಕಸ ವಿಲೇವಾರಿ ಮಾಡಲು ಕನಿಷ್ಠ 20 ಜನ ಪೌರಕಾರ್ಮಿಕರು ಬೇಕು. ಆದರೆ ಹನೂರು ಪಟ್ಟಣ ಪಂಚಾಯಿತಿಯಲ್ಲಿ ಖಾಯಂ 7 ಜನ ಪೌರಕಾರ್ಮಿಕರಿದ್ದು ಮೂವರು ಪುರುಷರು ನಾಲ್ಕು ಜನ ಮಹಿಳಾ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೊರಗುತ್ತಿಗೆ ಆಧಾರದಲ್ಲಿ ಐದು ಜನ ಪೌರಕಾರ್ಮಿಕರನ್ನು ನಿಯೋಜಿಸಿಕೊಳ್ಳಲಾಗಿತ್ತು. ಆದರೆ ಪ್ರತಿ ತಿಂಗಳು ವೇತನ ನೀಡದೆ ಇರುವುದರಿಂದ ಒಬ್ಬ ಪೌರಕಾರ್ಮಿಕ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಹೊಸದಾಗಿ ಪೌರಕಾರ್ಮಿಕರುಗಳನ್ನು ನೇಮಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇರುವ ಖಾಯಂ 7 ಜನ ಪೌರಕಾರ್ಮಿಕರ ಪೈಕಿ ಅಂಡಾಳಮ್ಮ, ಮುರಳಿ ಎಂಬ ಇಬ್ಬರು ಪೌರಕಾರ್ಮಿಕರು ಕೆಲಸಕ್ಕೆ ಗೈರು ಹಾಜರಾಗಿ ರಸ್ತೆ ಬದಿಯಲ್ಲಿ ಚಿಂದಿ ಆಯುತ್ತಿದ್ದಾರೆ. ಇವರ ಪರವಾಗಿ ಇಬ್ಬರು ಮಹಿಳಾ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದು, ಇವರಿಗೆ ತಿಂಗಳಿಗೆ 10 ಸಾವಿರ ವೇತನ ನೀಡಲಾಗುತ್ತಿದೆ ಎಂಬ ಆರೋಪವಿದೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಹನೂರು ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಒಟ್ಟಾರೆ ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಯಾಗದ ಪರಿಣಾಮ ಎಲ್ಲೆಂದರಲ್ಲಿ ಕಸದ ರಾಶಿ ಕಾಣಿಸಿಕೊಳ್ಳುತ್ತಿದೆ. ಇನ್ನು ಮುಂದಾದರು ಸಂಬಂಧಪಟ್ಟ ಪಟ್ಟಣ ಪಂಚಾಯಿತಿ ಆಡಳಿತ ಹಾಗೂ ಅಧಿಕಾರಿಗಳು ಹೆಚ್ಚು ಪೌರಕಾರ್ಮಿಕರುಗಳನ್ನು ನೇಮಕ ಮಾಡಿಕೊಂಡು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.

 

Tags:
error: Content is protected !!