ಹನೂರು: ಹನೂರು ಪಟ್ಟಣದ ಆರ್.ಎಸ್.ದೊಡ್ಡಿ ಗ್ರಾಮದಿಂದ ಚಿಂಚಳ್ಳಿ ಗ್ರಾಮಕ್ಕೆ ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಹೋಗುತ್ತಿದ್ದ ಜೋಳದ ಕಡ್ಡಿಗೆ ಆಕಸ್ಮಿಕ ಬೆಂಕಿ ಬಿದ್ದಿದ್ದರು ವಿಚಾರ ತಿಳಿಯದೇ ಚಾಲಕ ತೆರಳುತ್ತಿದ್ದಾಗ, ಅದೇ ರಸ್ತೆಯಲ್ಲಿ ಬರುತ್ತಿದ್ದ ಹನೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆನಂದಮೂರ್ತಿ ವಿಚಾರ ತಿಳಿಸಿ ಮುಂದೆ ಆಗಬಹುದಾದ ದೊಡ್ಡ ಅನಾಹುತವೊಂದನ್ನು ತಪ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹನೂರು ತಾಲ್ಲೂಕಿನ ಚಿಂಚಳ್ಳಿ ಗ್ರಾಮದ ರವಿ ಎಂಬುವವರ ಟ್ರ್ಯಾಕ್ಟರ್‌ನಲ್ಲಿ ಆರ್.ಎಸ್.ದೊಡ್ಡಿ ಗ್ರಾಮದಿಂದ ಚಿಂಚಳ್ಳಿ ಗ್ರಾಮಕ್ಕೆ ಜೋಳದ ಕಡ್ಡಿಯನ್ನು ತುಂಬಿಕೊಂಡು ಹೋಗುತ್ತಿದ್ದಾಗ ಎಡಳ್ಳಿ ದೊಡ್ಡಿ ಗ್ರಾಮದ ಸಮೀಪ ಜೋಳದ ಕಡ್ಡಿಗೆ ಬೆಂಕಿ ಹೊತ್ತಿಕೊಂಡಿದೆ. ಆದರೆ ಇದನ್ನು ಗಮನಿಸದೆ ಚಾಲಕ ತೆರಳುತ್ತಿದ್ದಾಗ, ರಸ್ತೆಯಲ್ಲಿ ತೆರಳುತ್ತಿದ್ದ ಇನ್ಸ್‌ಪೆಕ್ಟರ್ ಆನಂದಮೂರ್ತಿ ಅವರು ಜೋಳದ ಕಡ್ಡಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ್ದಾರೆ.
ಇನ್ಸ್‌ಪೆಕ್ಟರ್ ಆನಂದಮೂರ್ತಿ ಅವರು, ತಕ್ಷಣ ಜೀಪ್‌ನಿಂದ ಇಳಿದು ಟ್ರ್ಯಾಕ್ಟರ್ ನಿಲ್ಲಿಸಿ ಕೂಲಿ ಕಾರ್ಮಿಕರಾದ ಬಸವಣ್ಣ, ಮಹದೇವಸ್ವಾಮಿ, ಸಿದ್ದಪ್ಪ ಎಂಬುವವರನ್ನು ಕೆಳಗಿಳಿಸಿದ್ದಾರೆ. ರವಿ ರವರು ಸ್ವಲ್ಪ ಮುಂದೆ ಹೋಗಿ ಜೋಳದ ಕಡ್ಡಿಯನ್ನು ಕೆಳಗೆ ಸುರಿದು ಟ್ರ್ಯಾಕ್ಟರ್ ಮುಂದೆ ನಿಲ್ಲಿಸಿದ್ದಾರೆ. ಅಷ್ಟರಲ್ಲಿ ಜೋಳದ ಕಡ್ಡಿ ಸಂಪೂರ್ಣವಾಗಿ ಉರಿದುಹೋಗಿತ್ತು. ಜೊತೆಗೆ ಟ್ರ್ಯಾಕ್ಟರ್‌ನಲ್ಲಿ ಜೋಳದ ಕಡ್ಡಿ ತುಂಬಲು ಅಳವಡಿಸಿದ್ದ ಮರಗಳು ಸಹ ಸಂಪೂರ್ಣ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಇನ್ಸ್‌ಪೆಕ್ಟರ್ ಆನಂದಮೂರ್ತಿರವರ ಸಮಯಪ್ರಜ್ಞೆಯಿಂದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜೋಳದ ಕಡ್ಡಿ ಸುಟ್ಟು ಭಸ್ಮವಾಗಿರುವುದರಿಂದ ಸುಮಾರು 6 ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ ಎಂದು ತಿಳಿದುಬಂದಿದೆ.





