ಕೊಳ್ಳೇಗಾಲ: ಮಾವನಿಂದ ದೈಹಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಸೊಸೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ನಡೆದಿದೆ.
ಆಶಾ ಎಂಬುವವರೇ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿಯಾಗಿದ್ದಾರೆ. 14 ವರ್ಷದ ಹಿಂದೆ ಕೊಳ್ಳೇಗಾಲದ ಶಾಂತರಾಜು ಎಂಬುವವರ ಜೊತೆ ಆಶಾ ವಿವಾಹವಾಗಿದ್ದರು. ಈ ದಂಪತಿಗೆ ಎರಡು ಮಕ್ಕಳು ಸಹ ಇದ್ದರು. ಪದೇ ಪದೇ ಆಶಾ ಮೇಲೆ ಮಾವ ಹಾಗೂ ಅತ್ತೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಕೊಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಇವರ ಹಿಂಸೆ ತಾಳಲಾರದೇ ಆತ್ಮಹತ್ಯೆ ಯೋಚನೆ ಮಾಡಿದ ತಾಯಿ ಆಶಾ, ಮಕ್ಕಳನ್ನು ರೆಡಿ ಮಾಡಿ ಕೈಗೆ 50 ರೂ ಕೊಟ್ಟು ಚೆನ್ನಾಗಿ ಬದುಕಿ ಎಂದು ಆಶೀರ್ವಾದ ಮಾಡಿ ಶಾಲೆಗೆ ಕಳುಹಿಸಿದ್ದಾರೆ. ಬಳಿಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಶವವನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆಂದು ಇರಿಸಲಾಗಿದ್ದು, ತಾಯಿಯ ಶವಕಂಡು ಮಕ್ಕಳು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





