ಹನೂರು: ತಾಲೂಕಿನ ಮಲೆ ಮಾದೇಶ್ವರ ಬೆಟ್ಟದಲ್ಲಿ ಉಸ್ತುವಾರಿ ಸಚಿವರ ವಿಶೇಷ ಪೂಜೆಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರಿಗೆ ಸತತ ಮೂರು ಗಂಟೆಗಳ ಕಾಲ ದರ್ಶನಕ್ಕೆ ಅವಕಾಶ ಮಾಡಿಕೊಡದ ಹಿನ್ನೆಲೆ ಭಕ್ತರು ನಿಂತಲ್ಲೇ ನಿಂತು ಹೈರಾಣ ಆಗಿದ್ದಾರೆ.
ನವರಾತ್ರಿ ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಇದಲ್ಲದೆ ನಾಳೆ ಮಲೆ ಮಾದೇಶ್ವರ ಬೆಟ್ಟದಲ್ಲಿ ಗಡಿನಾಡ ಉತ್ಸವ ಕಾರ್ಯಕ್ರಮ ಹಿನ್ನೆಲೆ ಶಿಕ್ಷಕರು ಸೇರಿದಂತೆ ಕುಟುಂಬಸ್ಥರು ಆಗಮಿಸಿದ್ದರು.
ಸಾವಿರಾರು ಸಂಖ್ಯೆಯಲ್ಲಿ ಮಲೆ ಮಾದೇಶ್ವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದರು ಸಹ ಸಚಿವರು ದರ್ಶನಕ್ಕೆ ಆಗಮಿಸುತ್ತಾರೆ ಎಂದು ಸತತ ಮೂರು ಗಂಟೆಗಳ ಕಾಲ ಯಾವೊಬ್ಬ ಭಕ್ತರನ್ನು ದೇವಾಲಯದ ಆವರಣಕ್ಕೆ ಬಿಡದ ಪರಿಣಾಮ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಮಕ್ಕಳು ವಯೋ ವೃದ್ಧರು ಪ್ರಾಧಿಕಾರದ ಆಡಳಿತ ವೈಫಲ್ಯಕ್ಕೆ ಕಿಡಿ ಕಾರಿದ್ದಾರೆ.
ನಾವು ಕುಟುಂಬ ಸಮೇತ ಮಲೆಮಾದೇಶ್ವರ ಬೆಟ್ಟಕ್ಕೆ ಆಗಮಿಸಿದ್ದೆವು ಆದರೆ ಸಚಿವರು ದರ್ಶನಕ್ಕೆ ಬರುತ್ತಾರೆ ಎಂದು ದರ್ಶನಕ್ಕೆ ಅವಕಾಶ ಮಾಡಿಕೊಡದ ಹಿನ್ನೆಲೆ ಮಕ್ಕಳು ಸೇರಿದಂತೆ ಕುಟುಂಬಸ್ಥರು ನಿಂತಲ್ಲೇ ನಿಂತು ಕಾಲ ಕಳೆಯುವಂತಾಗಿತ್ತು ಇದಲ್ಲದೆ ಸಮರ್ಪಕ ಅಸನ ಹಾಗೂ ಕುಡಿಯುವ ನೀರು ವ್ಯವಸ್ಥೆ ಇಲ್ಲದೆ ಭಕ್ತರು ತೊಂದರೆ ಅನುಭವಿಸಿದರು.





