ಚಾಮರಾಜನಗರ : ಗಣಪತಿ ಪೂಜೆ ವಿಚಾರದಲ್ಲಿ ಸಾಣೇಹಳ್ಳಿ ಪಂಡಿತಾರಾದ್ಯ ಶ್ರೀಗಳ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಯತ್ನಾಳ್, ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ಹೊಸದುರ್ಗ ತಾಲೂಕಿನ ಸಾಣೆಹಳ್ಳಿಯಲ್ಲಿ ಮಾತನಾಡಿದ್ದ ಶಿವಾಚಾರ್ಯ ಸ್ವಾಮೀಜಿ, ʼʼವೇದಿಕೆ ಕಾರ್ಯಕ್ರಮಗಳಲ್ಲಿ ಅಥವಾ ಮನೆಗಳಲ್ಲಿ ಗಣಪತಿಯನ್ನು ವಿಘ್ನ ನಿವಾರಕನನ್ನಾಗಿ ಪೂಜಿಸುವುದು, ಪ್ರಾರ್ಥನೆ ಸಲ್ಲಿಸುವುದು ನಮ್ಮ ಸಂಸ್ಕೃತಿಯಲ್ಲ. ಅದರ ಬದಲು ವಾಸ್ತವಕ್ಕೆ ತಕ್ಕುದಾದ ವಚನಗಳನ್ನು ಪಠಿಸಬೇಕುʼʼ ಎಂದು ಹೇಳಿದ್ದರು.
ಈ ಕುರಿತು ಇಂದು (ಸೋಮವಾರ) ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ”ನಮ್ಮಲ್ಲಿ ಕೆಲವರು ಸ್ವಾಮೀಜಿಗಳು ಕಮ್ಯೂನಿಸ್ಟ್ ಅಥವಾ ನಕ್ಸಲೈಟ್ ಆಗಬೇಕಿತ್ತು. ದುರ್ದೈವದಿಂದ ನಮ್ಮ ಖಾವಿ ಹಾಕಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.
”ರಾಜ್ಯೋತ್ಸವ ಪ್ರಶಸ್ತಿಗಾಗಿ ಕೆಲವು ಮಠಾಧೀಶರು ಹಿಂದೂ ವಿರೋಧಿ ಹೇಳಿಕೆ ಕೊಡುತ್ತಾರೆ. ಅಲ್ಲದೇ, ಕೋಟಿ ಕೋಟಿ ಅನುದಾನಕ್ಕಾಗಿ ಈ ರೀತಿ ಮಾತನಾಡುತ್ತಾರೆ ” ಎಂದು ಆರೋಪಿಸಿದರು.
ಇತ್ತೀಚೆಗೆ ವಿಶ್ವವಾಣಿ ಕನ್ನಡ ದಿನಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ”ಸಾಣೇಹಳ್ಳಿ ಸ್ವಾಮೀಜಿ ನಾಟಕ ಮಾಡಿಕೊಂಡು ಆರಾಮಿರಲಿ. ದೇವರ ತಂಟೆ ಬೇಡʼʼ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಶಾಸಕ ಯತ್ನಾಳ್ ಸ್ವಾಮೀಜಿಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.