Mysore
28
clear sky

Social Media

ಬುಧವಾರ, 11 ಫೆಬ್ರವರಿ 2026
Light
Dark

ಭಕ್ತರ ಸುರಕ್ಷತೆಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ: ಶಾಸಕ ಮಂಜುನಾಥ್ ಸೂಚನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ಫೆಬ್ರವರಿ.14ರಿಂದ ಆರಂಭಗೊಳ್ಳಲಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸಕ್ಕೆ ಲಕ್ಷಾಂತರ ಮಂದಿ ಭಕ್ತರು ಪಾದಯಾತ್ರೆಯ ಮೂಲಕ ಆಗಮಿಸುತ್ತಿದ್ದು ಅವರ ಸುರಕ್ಷತೆಗೆ ಕಟ್ಟೆಚ್ಚರ ವಹಿಸಿ, ಮುನ್ನೆಚ್ಚರಿಕೆಯಾಗಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಎಂದು ಶಾಸಕ ಎಂ.ಆರ್.ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.

ಹನೂರು ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ತಾಳುಬೆಟ್ಟ ಮಾರ್ಗದಲ್ಲಿ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದ ಸ್ಥಳಕ್ಕೆ ಭೇಟಿ ಕೊಟ್ಟು ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿ, ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ಬರುವ ಭಕ್ತಾದಿಗಳಿಗೆ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆ ಆಗಬಾರದು. ಮುಂದೆ ಈ ರೀತಿ ಘಟನೆ ಮರುಕಳಿಸಿದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು‌.

ಬೆಂಗಳೂರು, ಬಿಡದಿ, ರಾಮನಗರ, ಮಳವಳ್ಳಿ ಇನ್ನಿತರ ಕಡೆಯಿಂದ ಲಕ್ಷಾಂತರ ಭಕ್ತರು ಮಾದಪ್ಪನ ಸನ್ನಿಧಿಗೆ ಪಾದಯಾತ್ರೆಯಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತಾಳುಬೆಟ್ಟದಿಂದ ಮಲೆಮಹದೇಶ್ವರ ಬೆಟ್ಟದ ವರೆಗೆ ಭಕ್ತಾದಿಗಳಿಗೆ ಭದ್ರತೆಯನ್ನು ಒದಗಿಸುವಂತೆ ತಿಳಿಸಿದರು.

ಪಾದಯಾತ್ರೆಯಲ್ಲಿ ಬರುವ ಭಕ್ತಾದಿಗಳಿಗೆ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳಿ. ಭಕ್ತರಿಗೆ ಜಾಗೃತಿ ಮೂಡಿಸಿ, ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿ. ಭಕ್ತರ ಸುರಕ್ಷತೆಗೆ ಶ್ರಮವಹಿಸಿ ಎಂದು ನಿರ್ದೇಶನ ನೀಡಿದರು.

ಚಿರತೆ ದಾಳಿ ಪ್ರಕರಣ ಈ ಬಾರಿ ಮಾತ್ರ ಆಗಿದ್ದು, ಕಾಲ್ನಡಿಗೆಯಲ್ಲಿ ತೆರಳುವ ಯಾತ್ರಿಕರಿಗೆ ಅರಿವು ಮೂಡಿಸಿ. ಇನ್ಮುಂದೆ ಈ ರೀತಿ ಘಟನೆ ಆಗದಂತೆ ಎಚ್ಚರವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಚಾಮರಾಜನಗರ ಸಿಸಿಎಫ್ ಮಾಲತಿ ಪ್ರಿಯ, ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಭಾಸ್ಕರ್ ಸೇರಿದಂತೆ ಇತರರು ಇದ್ದರು.

Tags:
error: Content is protected !!