Mysore
18
few clouds

Social Media

ಶನಿವಾರ, 31 ಜನವರಿ 2026
Light
Dark

ದಂಟಳ್ಳಿ ಯೋಜನೆಗೆ ಡಿ.ಪಿ.ಆರ್ʼಗೆ ಒತ್ತಾಯಸಿ ಬೃಹತ್‌ ಪ್ರತಿಭಟನೆ

ಹನೂರು : ದಂಟಳ್ಳಿ ಏತ ನೀರಾವರಿ ಯೋಜನೆಗೆ ಡಿ.ಪಿ.ಆರ್ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಯುವ ಮುಖಂಡ ನಿಶಾಂತ್ ನೇತೃತ್ವದಲ್ಲಿ ವಡಕೆಹಳ್ಳ ಗ್ರಾಮದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರು ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಹಾಗೂ ಹನೂರು ವಿಧಾನಸಭಾ ಕ್ಷೇತ್ರದ ಯುವ ಮುಖಂಡ ನಿಶಾಂತ್ ರವರ ಅಭಿಮಾನಿಗಳು ವಡಕೆಹಳ್ಳ ಮಹದೇಶ್ವರ ಬೆಟ್ಟ ಮುಖ್ಯರಸ್ತೆಯಲ್ಲಿ ರಸ್ತೆ ತಡೆ ನಡೆಸಿ ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ದಂಟಳ್ಳಿ ಗ್ರಾಮದ ಮೂಲಕ ಕುರಟ್ಟಿ ಹೊಸೂರು, ಶೆಟ್ಟಳ್ಳಿ, ಕೌದಳ್ಳಿ, ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಅಂತರ್ಜಲ ಮಟ್ಟ ಹೆಚ್ಚಿಸಲು, ಕುಡಿಯುವ ನೀರಿನ ಭವಣೆ ನೀಗಿಸಲು ದಂಟಳ್ಳಿ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಿ ಡಿಪಿಆರ್ ಸಿದ್ದಪಡಿಸುವಂತೆ ಕಳೆದ 96 ದಿನಗಳಿಂದ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ನಡೆಸಲಾಗುತ್ತಿದೆ.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಎಂ.ಆರ್ ಮಂಜುನಾಥ್ ಜನವರಿ 15ರೊಳಗೆ ಡಿ.ಪಿ.ಆರ್ ಮಾಡಿಸುತ್ತೇನೆ. ಒಂದೊಮ್ಮೆ ಸಾಧ್ಯವಾಗದಿದ್ದರೆ ನಿಮ್ಮ ಜೊತೆ ಹೋರಾಟಕ್ಕೆ ಕೂರುತ್ತೇನೆ ಎಂದು ಭರವಸೆ ನೀಡಿದ್ದರು. ಜೊತೆಗೆ ಇಬ್ಬರು ಜಿಲ್ಲಾಧಿಕಾರಿಗಳು ಭೇಟಿ ನೀಡಿ ಡಿಪಿಆರ್ ಭರವಸೆ ನೀಡಿದ್ದರು, ಎಲ್ಲಾರ ಭರವಸೆಗಳು ಹುಸಿಯಾಗಿರುವುದರಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು.

ಯುವ ಮುಖಂಡ ನಿಶಾಂತ್ ಮಾತನಾಡಿ ದಂಟಲ್ಲಿ ಏತ ನೀರಾವರಿ ಯೋಜನೆಯಲ್ಲಿ ಕಳೆದ 96 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ಮಾಡಲಾಗುತ್ತಿದೆ. ಪ್ರತಿಯೊಬ್ಬ ಜನಪ್ರತಿನಿಧಿಗಳು ದಿನಾಂಕ ನಿಗದಿ ಮಾಡಿದರೆ ಹೊರತು ಅದನ್ನು ಅನುಷ್ಠಾನಕ್ಕೆ ತರಲಿಲ್ಲ, ಕಳೆದ 97 ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಬೆಟ್ಟಕ್ಕೆ ಬಂದಿದ್ದರು ಸೌಜನ್ಯಕ್ಕೂ ರೈತರನ್ನು ಮಾತನಾಡಿಸಲಿಲ್ಲ, ರಾಜ್ಯದ ಹಿರಿಯ ಸಚಿವರು ಕೇವಲ ಯೋಜನೆಯ ಬಗ್ಗೆ ಮಾತನಾಡುತ್ತಾರೆ. ಅದರ ಬದಲು ಚೇತ ನೀರಾವರಿ ಯೋಜನೆಯ ಮೂಲಕ ನಮ್ಮ ಭಾಗದ ರೈತರಿಗೆ ಕುಡಿಯುವ ನೀರು ಪೂರೈಕೆ ಮಾಡಿದರೆ ಹೆಚ್ಚಿನ ಅನುಕೂಲವಾಗಲಿದೆ ಮಳೆಗಾಲದ ಸಂದರ್ಭದಲ್ಲಿ ನದಿಯ ಮೂಲಕ ನೂರಾರು ಟಿಎಂಸಿ ಸಮುದ್ರದ ಪಾಲಾಗುತ್ತಿದೆ ಇದರಿಂದ ಆ ಭಾಗದ ರೈತರಿಗೂ ಯಾವುದೇ ಪ್ರಯೋಜನವಾಗುತ್ತಿಲ್ಲ, ಈ ಭಾಗದಲ್ಲಿ ಸಿಗುತ್ತಿರುವ ನೀರಿನಲ್ಲಿ ಫ್ಲೋರೈಡ್ ಅಂಶ ಜಾಸ್ತಿ ಇರುವುದರಿಂದ ಯುವಕರು ಯುವತಿಯರು ಕಿಡ್ನಿ ವೈಫಲ್ಯದಿಂದ ನರಳುತ್ತಿದ್ದಾರೆ. ಯಾವೊಬ್ಬ ಜನಪ್ರತಿನಿಧಿಗಳು ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನೇ ಪ್ರಾರಂಭಿಸಿಲ್ಲ, ಸರ್ಕಾರ ಹನೂರು ಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ದಟ್ಟ ಅರಣ್ಯದಲ್ಲಿ ನೇತ್ರಾವತಿ ನದಿಯ ಮೂಲಕ ಕೋಲಾರಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ ಆದರೆ ಕೇವಲ ಒಂದುವರೆ ಕಿಲೋಮೀಟರ್ ದೂರದಲ್ಲಿರುವ ನದಿಯಿಂದ ನೀರು ಕೊಡಲು ಸಾಧ್ಯವಾಗುತ್ತಿಲ್ಲ ಅರಣ್ಯ ಸಚಿವರು ಪಾಕಿಸ್ತಾನದವರ ಅಥವಾ ಅಮೆರಿಕದವರ ನಮ್ಮ ಸಮಸ್ಯೆಯನ್ನು ಬಗೆಹರಿಸಿ ಈ ಭಾಗದ ಜನರಿಗೆ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕ ಶೈಲೇಂದ್ರ ಮಾತನಾಡಿ ರಾಮಪುರ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಸಮರ್ಪಕ ಮಳೆಯಾಗದ ಪರಿಣಾಮ ಅಂತರ್ಜಲ ಮಟ್ಟ ಕುಸಿತಗೊಂಡಿದೆ ರೈತರು ಬೇರೆ ರಾಜ್ಯಗಳಿಗೆ ಗೂಳೇ ಹೊರಟಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು 16 ಕಿ.ಮೀ ಅಂತರದಲ್ಲಿರುವ ಕಾವೇರಿ ನದಿಯಿಂದ ದಂಟ ಹಳ್ಳಿ ಏತ ನೀರಾವರಿ ಯೋಜನೆಯನ್ನು ಅನುಷ್ಠಾನ ಮಾಡುವಂತೆ 96 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಆದರೆ ಸಂಬಂಧಪಟ್ಟ ಸಚಿವರು, ಸಂಸದರು ಪ್ರತಿಭಟನಾ ಸ್ಥಳಕ್ಕೆ ಬಾರದೆ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಭಾಗದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರವಿಫಲವಾಗಿದೆ ಮುಂದಿನ ದಿನಗಳಲ್ಲಿ ಏತ ನೀರಾವರಿ ಅನುಷ್ಠಾನ ಮಾಡದಿದ್ದರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹಿರಿಯ ಮುಖಂಡ ಪೊನ್ನಾಚಿ ಮಹದೇವಸ್ವಾಮಿ ಮಾತನಾಡಿ ನೆರೆಯ ತಮಿಳುನಾಡು ರಾಜ್ಯವು ತನ್ನ ರಾಜ್ಯದ ಜನರಿಗೆ ಸಾವಿರಾರು ಎತ್ತರ ಪ್ರದೇಶದಿಂದ ಮೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ ಈ ವ್ಯಾಪ್ತಿಯಲ್ಲಿಯು ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿಯೇ ಪೈಪ್ ಲೈನ್ ಅಳವಡಿಸಿದ್ದಾರೆ ನಮ್ಮ ರಾಜ್ಯಕ್ಕೆ ಒಂದು ಕಾನೂನು ನೆರೆಯ ತಮಿಳುನಾಡು ರಾಜ್ಯಕ್ಕೆ ಒಂದು ಕಾನೂನು ಇದೆಯೇ ಎಂದು ಪ್ರಶ್ನಿಸಿ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರ ಚರ್ಚೆ ನಡೆಸಿ ಒಂದು ಸೂಕ್ತ ನಿರ್ಧಾರಕ್ಕೆ ಬಂದು ಈ ಭಾಗದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲದಿದ್ದರೆ ಎಲ್ಲಾ ಹೋರಾಟಕ್ಕೂ ಸಿದ್ಧವಾಗಿದ್ದೇವೆ ಎಂದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರತಿಭಟನಾಕಾರರ ಮನವಿ ಆಲಿಸಿ ನಂತರ ಮಾತನಾಡಿದ ಅವರು ಈ ಭಾಗದಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿ ಕುಡಿಯುವ ನೀರಿನ ಸಮಸ್ಯೆ ಇರುವುದು ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. ಜಿಲ್ಲಾಧಿಕಾರಿಗಳು ಸಹ ಸಮಸ್ಯೆಯ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದಾರೆ ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚೆ ನಡೆಸಿ ದಿನಾಂಕವನ್ನು ನಿಗದಿ ಮಾಡಿ ರೈತ ಮುಖಂಡರುಗಳ ಜೊತೆ ಚರ್ಚೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಲಾಗುವುದು ಎಂದರು ಆದರೆ ಪ್ರತಿಭಟನಾಕಾರರು ಹಿಂದೆ ದಿನಾಂಕ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು ಆದರೆ ಹೆಚ್ಚುವರಿ ಜಿಲ್ಲಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ದಿನಾಂಕವನ್ನು ನಾನು ನಿಗದಿ ಮಾಡಲು ಸಾಧ್ಯವಿಲ್ಲ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ದಿನಾಂಕ ನಿಗದಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಎರಡು ಗಂಟೆಗಳಿಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ : ದಂಟಲ್ಲಿ ಏತ ನೀರಾವರಿ ಯೋಜನೆಗೆ ಡಿಪಿಆರ್ ಮಾಡದ ಹಿನ್ನೆಲೆ ರಸ್ತೆ ತಡೆ ನಡೆಸುವುದಾಗಿ ರೈತ ಮುಖಂಡರು ಈಗಾಗಲೇ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು ಆದರೂ ಪ್ರತಿಭಟನಾ ಸ್ಥಳಕ್ಕೆ ಸಚಿವರು ಸಂಸದರು ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಬಾರದೆ ಇದ್ದಿದ್ದರಿಂದ ಆಕ್ರೋಶಗೊಂಡ ರೈತ ಮುಖಂಡರು ಮಲೆ ಮಹದೇಶ್ವರ ಬೆಟ್ಟ, ಕೊಳ್ಳೇಗಾಲ ಮುಖ್ಯರಸ್ತೆಯಲ್ಲಿ ಕುಳಿತು ಶಾಮಿಯಾನ ಅಳವಡಿಸಿ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆ ನಡೆಸಿದರು. ಇದರಿಂದ ರಸ್ತೆಯ ಎರಡು ಬದಿಗಳಲ್ಲಿ ಕಿಲೋಮೀಟರ್ಗಟ್ಟಲೆ ವಾಹನಗಳು ನಿಂತು ಟ್ರಾಫಿಕ್ ಜಾಮ್ ಉಂಟಾಯಿತು.

ಈ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್ ಮಾತನಾಡಿ, ನೀವು ನಿಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೀರಾ ಅದಕ್ಕೆ ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ, ಆದರೆ ರಸ್ತೆಯನ್ನು ಬಿಟ್ಟು ಖಾಲಿ ಜಾಗದಲ್ಲಿ ನಿಮ್ಮ ಪ್ರತಿಭಟನೆಯನ್ನು ಮುಂದುವರಿಸಿ ಎಂದು ಮನವಿ ಮಾಡಿಕೊಂಡರು ಆದರೆ ರೈತರು ಇದಕೊಪ್ಪದೆ ರಸ್ತೆಯಲ್ಲಿ ಕುಳಿತಿದ್ದರು. ಪರಿಸ್ಥಿತಿ ಅರಿತಾ ಪೊಲೀಸರು ರೈತರನ್ನು ಮನವೊಲಿಸಿ ರಸ್ತೆಯಲ್ಲಿ ಕುಳಿತಿದ್ದ ರೈತರನ್ನು ಖಾಲಿ ನಿವೇಶನದಲ್ಲಿ ಕೂರಿಸುವಲ್ಲೂ ಯಶಸ್ವಿಯಾದರು ತದನಂತರ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

ಇನ್ನು ಹೆಚ್ಚುವರಿ ಜಿಲ್ಲಾಧಿಕಾರಿ 15 ದಿನಗಳ ಕಾಲಾವಕಾಶ ಕೇಳಿಕೊಂಡಿದ್ದಾರೆ ಒಂದೊಮ್ಮೆ ದಂಟಳ್ಳಿ ಏತ ನೀರಾವರಿ ಯೋಜನೆ ಸಂಬಂಧ ಯಾವುದೇ ಪ್ರಕ್ರಿಯೆಗಳು ಪ್ರಾರಂಭವಾಗದಿದ್ದರೆ ಮತ್ತೊಮ್ಮೆ ರಸ್ತೆ ತಡೆ ನಡೆಸೋಣ ಅಲ್ಲಿಯವರೆಗೆ ಅಹೋರಾತ್ರಿ ಧರಣಿ ಮುಂದುವರಿಸೋಣ ಎಂದು ರೈತ ಮುಖಂಡರುಗಳು ತೀರ್ಮಾನ ತೆಗೆದುಕೊಂಡರು.

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು, ಪ್ರಭಾರ ಉಪ ವಿಭಾಗಾಧಿಕಾರಿ ಬಸವರಾಜು, ತಹಸಿಲ್ದಾರ್ ಚೈತ್ರ ಪಾಲ್ಗೊಂಡು ರೈತ ಮುಖಂಡರುಗಳ ಜೊತೆ ಚರ್ಚೆ ನಡೆಸಿದರು.

ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಧರ್ಮೇಂದ್ರ, ಇನ್ಸ್ಪೆಕ್ಟರ್ಗಳಾದ ಚಿಕ್ಕರಾಜ ಶೆಟ್ಟಿ, ಆನಂದಮೂರ್ತಿ ಜಗದೀಶ್ ನವೀನ್, ಉಪನಿರೀಕ್ಷಕರುಗಳಾದ ಈಶ್ವರ ರವಿ ಕರಿಬಸಪ್ಪ ಸೇರಿದಂತೆ ಇನ್ನಿತರರು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.

ಪ್ರತಿಭಟನೆಯಲ್ಲಿ ತಮಿಳುನಾಡು ರೈತ ಸಂಘದ ರಾಜ್ಯಾಧ್ಯಕ್ಷ ರವಿಕುಮಾರ್ ಗ್ರಾಮ ಘಟಕದ ಅಧ್ಯಕ್ಷ ಅರ್ಪುದರಾಜ್, ಮಾಜಿ ಸೈನಿಕರಾದ ಜೋಸೆಫ್, ಲೂಯಿಸ್ ಪೆರಿಯನಾಯಗಂ, ಮುಖಂಡರಾದ ಗುಂಡಗಾಲ ಬಸವರಾಜಪ್ಪ ಜಿ.ಕೆ ಹೊಸೂರು ಬಸವರಾಜು ಪ್ರೀತಂ, ಚೇತನ್, ಚಂಗವಾಡಿ ರಾಜು ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತ ಮುಖಂಡರು ಮಹಿಳೆಯರು ಮಕ್ಕಳು ಯುವಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Tags:
error: Content is protected !!