ಹನೂರು : ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ವ್ಯಕ್ತಿ ಮೃತಪಟ್ಟಿರುವುದರಿಂದ ಚಿರತೆ ಸೆರೆಹಿಡಿಯಲು ಅಗತ್ಯ ಕ್ರಮ ವಹಿಸಲಾಗಿದೆ ಎಂದು ಡಿಸಿಎಫ್ ಭಾಸ್ಕರ್ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿರತೆ ಸೆರೆ ಹಿಡಿಯಲು ಎರಡು ಬೋನು ಇಡಲಾಗಿದ್ದು 50ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಬೋನಿನಲ್ಲಿ ಎರಡು ನಾಯಿಗಳನ್ನು ಕಟ್ಟಿ ಹಾಕಲಾಗಿದೆ. ಇದಲ್ಲದೆ ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ಡ್ರೋನ್ ತಂಡ ಹಾಗೂ ಮೈಸೂರಿನಿಂದ ಚಿರತೆ ಕಾರ್ಯಾಚರಣೆ ಪಡೆ ಹಾಗೂ ತಜ್ಞ ವೈದ್ಯಾಧಿಕಾರಿಗಳಾದ ಡಾ.ಆದರ್ಶ್ ರವರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಮಲೆ ಮಹದೇಶ್ವರ ಬೆಟ್ಟ, ರಾಮಪುರ ಹೂಗ್ಯಂ ವಲಯ ಅರಣ್ಯ ಅಧಿಕಾರಿಗಳು ಹಾಗೂ 3 ವಲಯದ ಗಸ್ತು ಪಾಲಕರು ಹಾಗೂ ಅರಣ್ಯ ರಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಪ್ರವಾಸಿಗರು ಹಾಗೂ ಸಾರ್ವಜನಿಕರ ಸಹಕಾರ ಅತಿ ಮುಖ್ಯವಾಗಿದೆ ಎಂದರು.




