ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು: ಹನೂರು ಪಟ್ಟಣದ ಗ್ರಾಮದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವವನ್ನು ಈ ಬಾರಿಯೂ ಎಲ್ಲಾ ಸಮುದಾಯದವರು ಶಾಂತಿ ಸೌಹಾರ್ದತೆಯಿಂದ ಯಶಸ್ವಿಗೊಳಿಸಲು ಸಹಕಾರ ನೀಡಬೇಕು ಎಂದು ತಹಸಿಲ್ದಾರ್ ಚೈತ್ರ ತಿಳಿಸಿದರು.
ಹನೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ ಸಂಬಂಧ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಹನೂರು ಪಟ್ಟಣದಲ್ಲಿ ನಾಲ್ಕು ದಿನಗಳ ಕಾಲ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವವನ್ನು ಹಲವಾರು ವರ್ಷಗಳಿಂದ ಎಲ್ಲಾ ಸಮುದಾಯದವರು ಒಟ್ಟುಗೂಡಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಅದೇ ರೀತಿ ಪಟ್ಟಣದ ಸರ್ವ ಜನಾಂಗದವರು ಈ ಬಾರಿಯೂ ಶ್ರೀ ಬೆಟ್ಟಳಿ ಮಾರಮ್ಮ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ಆಚರಣೆ ಮಾಡಲು ಸಹಕಾರ ನೀಡಬೇಕು.
ಫೆಬ್ರವರಿ.24 ರಂದು ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತಿದ್ದು, ಮಾರ್ಚ್ 9 ರಿಂದ 12 ರವರೆಗೆ ಜಾತ್ರಾ ಮಹೋತ್ಸವ ಜರುಗಲಿದೆ. ಪ್ರತಿಯೊಬ್ಬರು ಪ್ರೀತಿ ವಿಶ್ವಾಸದಿಂದ ಹಬ್ಬ ಆಚರಣೆ ಮಾಡಬೇಕು.
ಒಂದೊಮ್ಮೆ ಹಬ್ಬದ ಸಂದರ್ಭದಲ್ಲಿ ಕಾನೂನು ಪಾಲನೆ ಮಾಡದೆ ಕೋಮು ಗಲಭೆಗಳಿಗೆ ಅವಕಾಶ ಮಾಡಿಕೊಟ್ಟರೆ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಇದೇ ವೇಳೆ ಇನ್ಸ್‌ಪೆಕ್ಟರ್ ಆನಂದಮೂರ್ತಿ, ಸಬ್ ಇನ್ಸ್‌ಪೆಕ್ಟರ್ ಸಾಹೇಬ್ ಗೌಡ, ಆರೋಗ್ಯ ನಿರೀಕ್ಷಕ ಪ್ರಕಾಶ್, ಮುಖಂಡರಾದ ಲಿಂಗರಾಜುಗೌಡ, ರವಿ, ಶ್ರೀನಿವಾಸ್, ಮಂಜೇಶ್, ರಾಜುಗೌಡ, ಮಲ್ಲು, ಆನಂತ್, ಬಾಲರಾಜ್ ನಾಯ್ಡು, ಸಿದ್ದರಾಜು, ನಂಜಪ್ಪ, ಪ್ರಸನ್ನ ಮಹದೇವ ಸೇರಿದಂತೆ ಇನ್ನಿತರರು ಹಾಜರಿದ್ದರು.





