Mysore
25
clear sky

Social Media

ಬುಧವಾರ, 28 ಜನವರಿ 2026
Light
Dark

ಮತ್ತೆ ಕೋಟಿ ಒಡೆಯನಾದ ಪವಾಡ ಪುರುಷ ಮಲೆ ಮಹದೇಶ್ವರ

ಹನೂರು: ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ 28 ದಿನಗಳ ಅವಧಿಯಲ್ಲಿ 1.94 ಕೋಟಿ ರೂ. ಸಂಗ್ರಹವಾಗಿದೆ.

ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಬುಧವಾರ ಬೆಳಿಗ್ಗೆ 6.30 ಗಂಟೆಯಲ್ಲಿ ಸಾಲೂರು ಬೃಹನ್ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ಪ್ರಾರಂಭಿಸಲಾಯಿತು. ಎಣಿಕೆ ಕಾರ್ಯವು ರಾತ್ರಿ 8 ಗಂಟೆಯವರೆಗೂ ನಡೆಯಿತು.

ಈ ಬಾರಿ ಕ್ಷೇತ್ರಕ್ಕೆ ‌ಸಾರ್ವಜನಿಕರು ಅಮಾವಾಸ್ಯೆ, ಸರ್ಕಾರಿ ರಜಾ ದಿನಗಳು ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಹರಕೆಯ ರೂಪದಲ್ಲಿ ಹಣ, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದಾರೆ. ಹುಂಡಿಗಳ ಎಣಿಕೆಯಲ್ಲಿ ಈ ಬಾರಿ 1,94,49,243 ರೂ. ಸಂಗ್ರಹವಾಗಿದೆ. ಇದರ ಜೊತೆಗೆ 63 ಗ್ರಾಂ ಚಿನ್ನ ಮತ್ತು 1 ಕೆಜಿ 510 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಇದೆಲ್ಲದರ ಜೊತೆಗೆ ಹುಂಡಿಯಲ್ಲಿ ವಿದೇಶಿ ನೋಟುಗಳು, ಚಲಾವಣೆಯಲ್ಲಿ ಇಲ್ಲದ 2000 ಮುಖಬೆಲೆಯ 06 ನೋಟುಗಳು ಕೂಡ ಸಂಗ್ರಹವಾಗಿವೆ.

ಇದೇ ವೇಳೆ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಲೆಕ್ಕ ಅಧೀಕ್ಷಕರಾದ ಗುರುಮಲ್ಲಯ್ಯ, ನಾಮನಿರ್ದೇಶಿತ ಸದಸ್ಯರಾದ ಗಂಗನ ತಿಮ್ಮಯ್ಯ, ಭಾಗ್ಯಮ್ಮ, ಮಹದೇವಪ್ಪ, ಚಾಮರಾಜನಗರ ಜಿಲ್ಲಾಡಳಿತ ಕಛೇರಿ ಶಶಿಕುಮಾರ್, ಬ್ಯಾಂಕ್ ನೌಕರರು, ಪೊಲೀಸ್ ಸಿಬ್ಬಂದಿಗಳು ಹಾಗೂ ಪ್ರಾಧಿಕಾರದ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.

 

Tags:
error: Content is protected !!