ಹನೂರು: ಪವಾಡ ಪುರುಷ ನೆಲೆಸಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಸಂಭ್ರಮ ಮನೆಮಾಡಿದೆ.
ಇಂದಿನಿಂದ ಮಾರ್ಚ್.1ರವರೆಗೂ ಜಾತ್ರೆ ನಡೆಯಲಿದ್ದು, ಜಾತ್ರೆಗೆ ಲಕ್ಷಾಂತರ ಮಂದಿ ಸಾರ್ವಜನಿಕರು ಆಗಮಿಸಲಿದ್ದಾರೆ.
ಕರ್ನಾಟಕ ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಸಾವಿರಾರು ಮಂದಿ ಭೇಟಿ ನೀಡಲಿದ್ದು, ಬೆಟ್ಟದಲ್ಲಿ ಕಾಲಿಡಲು ಜಾಗವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಈ ಜಾತ್ರೆಗೆ ಲಕ್ಷಾಂತರ ಮಂದಿ ಬೆಟ್ಟಕ್ಕೆ ತೆರಳುವುದರಿಂದ ಇಂದಿನಿಂದ ಮಾರ್ಚ್.1ರವರೆಗೆ ಐದು ದಿನಗಳ ಕಾಲ ದ್ವಿಚಕ್ರ ವಾಹನ, ಆಟೋರಿಕ್ಷಾ, ಗೂಡ್ಸ್ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ.
ನಾಳೆ ಮಹಾಶಿವರಾತ್ರಿಯಂದು ಪವಾಡ ಪುರುಷ ಮಲೆ ಮಹದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ ನಡೆಯಲಿದ್ದು, ರಾತ್ರಿಯಿಡೀ ಜಾಗರಣೆ, ಉತ್ಸವ, ವಿಶೇಷ ಅಭಿಷೇಕ, ಪೂಜೆ-ಪುನಸ್ಕಾರಗಳು ನಡೆಯಲಿವೆ.
ಇನ್ನು ಫೆಬ್ರವರಿ.27ರಂದು ವಿಶೇಷ ಸೇವೆ ಉತ್ಸವಾಧಿಗಳು ನಡೆಯಲಿದ್ದು, 28ರಂದು ಅಮಾವಾಸ್ಯೆ ಪೂಜೆ ಹಾಗೂ ಮಾರ್ಚ್.1ರಂದು ಮಹದೇಶ್ವರನ ಮಹಾರಥೋತ್ಸವ ನಡೆಯಲಿದೆ.
ಐದು ದಿನಗಳ ಕಾಲ ಜಾತ್ರೆ ನಡೆಯಲಿರುವ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಸಾರ್ವಜನಿಕರು ಪಾದಯಾತ್ರೆ ಮೂಲಕ ತೆರಳುತ್ತಿದ್ದಾರೆ. ಇನ್ನು ಬೆಟ್ಟದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.





