ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ಕಟ್ಟೆ ಮಾರಮ್ಮನ ಜಾತ್ರಾ ಮಹೋತ್ಸವವು ಭಾನುವಾರ ನೂರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಮಲೆ ಮಹದೇಶ್ವರ ಬೆಟ್ಟದ ಗ್ರಾಮ ದೇವತೆ ಕಟ್ಟೆ ಮಾರಮ್ಮನ ಹಬ್ಬದ ಪ್ರಯುಕ್ತ ಜಾತ್ರಾ ಮಹೋತ್ಸವ ಅಂಗವಾಗಿ ಮಾರಮ್ಮ ದೇವಿಗೆ ವಿಶೇಷ ಪೂಜೆ ಕಾರ್ಯಕ್ರಮಗಳು ಬೇಡಗಂಪಣ ಸಮುದಾಯದ ಸಂಪ್ರದಾಯದಂತೆ ನೆರವೇರಿದವು.
ಒನಕೆ ವೇಷ ಧರಿಸಿ ಸಂಭ್ರಮಾಚರಣೆ
ಬೇಡಗಂಪಣ ಸಮುದಾಯದ ಮಕ್ಕಳು, ಹಿರಿಯರು ವಿವಿಧ ವೇಷಭೂಷಣಗಳನ್ನು ಅಲಂಕರಿಸಿ ಒನಕೆ ವೇಷ ಧರಿಸಿ ದೇವಾಲಯದ ಮುಂಭಾಗ ಕುಣಿಯುವುದು ವಾಡಿಕೆ. ಅದರಂತೆ ಮಾರಮ್ಮನ ಹಬ್ಬದ ಜಾತ್ರಾ ಮಹೋತ್ಸವದಲ್ಲಿ ನೋಡುಗರ ಕಣ್ಮನ ಸೆಳೆಯುವಂತೆ ಒನಕೆ ವೇಷಧಾರಿಗಳ ಸಾಂಸ್ಕ ತಿಕ ನೃತ್ಯ ಪ್ರದರ್ಶನ ಭಕ್ತ ಸಮೂಹದ ಗಮನ ಸೆಳೆಯಿತು.
18 ಹಳ್ಳಿಗಳಿಂದಲೂ ಭಕ್ತರು ಭಾಗಿ
ಕಟ್ಟೆ ಮಾರಮ್ಮನ ಜಾತ್ರಾ ಮಹೋತ್ಸವದ ಹಬ್ಬಕ್ಕೆ ಮ.ಬೆಟ್ಟದ ತಪ್ಪಲಿನಲ್ಲಿ ಬರುವ ವಿವಿಧ ಗ್ರಾಮಗಳಿಂದ ಬೇಡಗಂಪಣ ಸಮುದಾಯದ ನಿವಾಸಿಗಳು ಆಗಮಿಸಿ, ಸಾಂಪ್ರದಾಯಿಕ ಪೂಜೆಯಲ್ಲಿ ಪಾಲ್ಗೊಂಡಿದ್ದರು.





