ಹನೂರು: ಪವಾಡ ಪುರುಷ ನೆಲೆಸಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾ ಶಿವರಾತ್ರಿ ಜಾತ್ರೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ ಮಹದೇಶ್ವರ ಸ್ವಾಮಿ ಮಹಾರಥೋತ್ಸವವು ಅದ್ದೂರಿಯಾಗಿ ಜರುಗಿತು.
ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಆ ಬಳಿಕ ಮಹದೇಶ್ವರ ಸ್ವಾಮಿಯ ಮಹಾರಥೋತ್ಸವವನ್ನು ಸಾರ್ವಜನಿಕರು ಭಕ್ತಿಯಿಂದ ಎಳೆದ ಉಘೇ ಉಘೇ ಮಾದಪ್ಪ ಎಂದು ಜೈಕಾರ ಹಾಕಿದರು.
ಮಹಾಶಿವರಾತ್ರಿ ಜಾತ್ರಾ ರಥೋತ್ಸವದ ಪ್ರಯುಕ್ತ ಮಾಯ್ಕಾರ ಮಾದಪ್ಪನಿಗೆ ವಿವಿಧ ಪೂಜಾ ಕೈಂಕರ್ಯಗಳು ನಡೆದ ಬಳಿಕ ಮಹದೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಬಿಳಿ ಆನೆಯ ಮೇಲೆ ಪ್ರತಿಷ್ಠಾಪಿಸಿ ದೇವಾಲಯದ ಒಳಭಾಗದಲ್ಲಿ ಬೇಡಗಂಪಣ ಸಮುದಾಯದ ವಿಧಿ ವಿಧಾನಗಳಲ್ಲಿ ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ನಂತರ ಇಂದು ಬೆಳಿಗ್ಗೆ ಸಾವಿರಾರು ಸಾರ್ವಜನಿಕರು ರಥೋತ್ಸವವನ್ನು ಎಳೆದು, ಹಣ್ಣು ಜವನ ಎಸೆದು ಭಕ್ತಿ ಪರಾಕಾಷ್ಠೆ ಮೆರೆದರು.





