ಹನೂರು : ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ ಮಾಡಿ ಸಾವಿಗೆ ಕಾರಣವಾಗಿದ್ದ ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿ 24 ಗಂಟೆ ಅವಧಿಯಲ್ಲಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಮಂಡ್ಯ ತಾಲೂಕಿನ ಚಿರನಹಳ್ಳಿ ಗ್ರಾಮದ ಪ್ರವೀಣ್ ಹಾಗೂ ಸ್ನೇಹಿತರು ಪಾದಯಾತ್ರೆಯ ಮೂಲಕ ಜನವರಿ 21ರ ಬುಧವಾರ ಬೆಳಗ್ಗೆ ತಾಳಬೆಟ್ಟದಿಂದ ಪಾದಯಾತ್ರೆ ಹೊರಟಿದ್ದರು. ರಂಗಸ್ವಾಮಿ ಒಡ್ಡಿನ ಸಮೀಪ ಪಾದಯಾತ್ರೆ ತೆರಳುತ್ತಿದ್ದ ಪ್ರವೀಣನ ಮೇಲೆ ಬೃಹತ್ ಗಾತ್ರದ ಚಿರತೆ ದಾಳಿ ನಡೆಸಿ ಅರಣ್ಯಕ್ಕೆ ಎಳೆದೊಯ್ಯುತ್ತಿತ್ತು ಪರಿಣಾಮ ಪ್ರವೀಣ್ ಅರಣ್ಯದಲ್ಲಿ ಮೃತಪಟ್ಟಿದ್ದರು.
ಘಟನೆ ಸಂಬಂಧ ಶಾಸಕ ಎಂ.ಆರ್ ಮಂಜುನಾಥ್ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಪಾದಯಾತ್ರಿಕನ ಮೇಲೆ ದಾಳಿ ನಡೆಸಿದ್ದ ಚಿರತೆಯನ್ನು ಸೆರೆ ಹಿಡಿಯುವಂತೆ ಸೂಚನೆ ನೀಡಿದ್ದರು. ಅವರ ಸೂಚನೆಯಂತೆ ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಭಾಸ್ಕರ್ ಹಾಗೂ ತಂಡ ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡಿದ್ದರು.
ರಂಗಸ್ವಾಮಿ ಒಡ್ಡಿನ ಸಮೀಪ ಆಗಾಗ ಕಾಣಿಸಿಕೊಳ್ಳುತ್ತಿದ್ದ ಸಮೀಪದಲ್ಲಿ ಚಿರತೆ ಸೆರೆ ಹಿಡಿಯಲು ಎರಡು ಬೋನುಗಳನ್ನು ಇಡಲಾಗಿದ್ದು ಬೋನಿನಲ್ಲಿ ಎರಡು ನಾಯಿಗಳನ್ನು ಸಹ ಕಟ್ಟು ಹಾಕಲಾಗಿತ್ತು. ಜೊತೆಗೆ, ಚಿರತೆ ಕಾರ್ಯಾಪಡೆ, ಕೂಬಿಂಗ್,ಡ್ರೋನ್ ತಂಡ ಸ್ಥಳದಲ್ಲಿಯೇ ಇದ್ದು ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಚಿರತೆಯು ರಂಗಸ್ವಾಮಿ ಒಡ್ಡಿನ ಸಮೀಪದಲ್ಲಿಯೇ ಸಂಚರಿಸುತ್ತಿರುವುದನ್ನು ಡ್ರೋನ್ ಕ್ಯಾಮರದಲ್ಲಿ ಪತ್ತೆಹಚ್ಚಿ, ಚಿರತೆಯ ಚಲನ ವಲನದ ಮೇಲೆ ನಿಗಾ ವಹಿಸಲಾಗಿತ್ತು.
ಇದಲ್ಲದೆ ಮಲೆ ಮಾದೇಶ್ವರ ವನ್ಯಜೀವಿಧಾಮದ ಎಸ್ ಎಫ್ ವಿರಾಜ್ ಹೊಸೂರು, ಮಲೆ ಮಹದೇಶ್ವರ ಬೆಟ್ಟ, ರಾಮಪುರ ಹೊಗ್ಯಂ ವಲಯ ಅರಣ್ಯ ಅಧಿಕಾರಿಗಳಾದ ಮಾದೇಶ್, ಜಿತೇಂದ್ರ, ಬಂಡಿಪುರ ಚಾಮರಾಜನಗರ ಮೈಸೂರು ಡ್ರೋನ್ ತಂಡ, ಮೈಸೂರಿನ ಚಿರತೆ ಕಾರ್ಯಪಡೆ, ವೈದ್ಯಾಧಿಕಾರಿಗಳಾದ ಡಾ. ಆದರ್ಶ್ ಹಾಗೂ 50ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿಗಳ ನೇತೃತ್ವದಲ್ಲಿ ಹಲವು ಕಡೆ, ಕೂಬಿಂಗ್ ನಡೆಸಲಾಗಿತ್ತು.
ಗುರುವಾರ ಬೆಳಗಿನ ಜಾವ 4:30 ಗಂಟೆಯಲ್ಲಿ ಚಿರತೆ ರಂಗಸ್ವಾಮಿ ಒಡ್ಡಿನ ಸುತ್ತಮುತ್ತಲು ಓಡಾಟ ನಡೆಸುತ್ತಿರುವುದು ಡ್ರೋನ್ ನಲ್ಲಿ ಸೆರೆ ಹಿಡಿಯಲಾಗಿತ್ತು.
ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಾಮರಾಜನಗರ ಜಿಲ್ಲೆಯಲ್ಲಿ ಮಾನವ ಪ್ರಾಣಿ ಸಂಘರ್ಷ ನಿರಂತರವಾಗಿ ಹೆಚ್ಚಳವಾಗಿತ್ತು. ಈ ಸಂಬಂಧ ಸಾರ್ವಜನಿಕರು ಹಾಗೂ ರೈತರು ಜಿಲ್ಲೆಯಾದ್ಯಂತ ಹಲವಾರು ಪ್ರತಿಭಟನೆಗಳನ್ನು ನಡೆಸಿ ಸರ್ಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.
ಗುರುವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್ ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಪಾದಯಾತ್ರೆಕಾರಿಗೆ ಸೂಕ್ತ ರಕ್ಷಣೆ ನೀಡಿ ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗದಂತೆ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸೂಕ್ತ ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದ್ದರು. ಇದಲ್ಲದೆ ಚಿರತೆಯನ್ನು ಅತಿ ಶೀಘ್ರದಲ್ಲಿಯೇ ಸೆರೆ ಹಿಡಿಯಬೇಕೆಂದು ಖಡಕ್ ಸೂಚನೆ ನೀಡಿದ್ದರು.
ಅರಣ್ಯ ಇಲಾಖೆ ಅಧಿಕಾರಿಗಳು ನಿರಂತರವಾಗಿ ಕಾರ್ಯಾಚರಣೆ ಮಾಡಿದರು ಚಾಲಾಕಿ ಚಿರತೆ ಬೋನಿಗೆ ಬಿದ್ದಿರಲಿಲ್ಲ, ಗುರುವಾರ ರಾತ್ರಿ ಪಶು ವೈದ್ಯಾಧಿಕಾರಿ ಡಾಕ್ಟರ್ ಆದರ್ಶ್ ರವರು ಅರವಳಿಕೆ ಚುಚ್ಚುಮದ್ದು ನೀಡುವುದರ ಮೂಲಕ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಒಟ್ಟಾರೆ ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಭಾಸ್ಕರ್ ನೇತೃತ್ವದ ತಂಡ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.




