ಮಹಾದೇಶ್ ಎಂ ಗೌಡ
ಹನೂರು: ಮಳೆಯನ್ನೇ ಆಶ್ರಯಿಸಿ ಬೆಳೆಯಬೇಕಿದ್ದ ಸ್ಥಿತಿ, ಕುಸಿಯುತ್ತಿರುವ ಅಂತರ್ಜಲದಿಂದ ಪಡಿಪಟಾಲು ಪಡುತ್ತಿದ್ದ ರೈತರ ಕಷ್ಟ ಕೊನೆಗೂ ನೀಗಿದಂತಾಗಿದೆ. 30 ವರ್ಷಗಳ ಬಳಿಕ ಹನೂರು ತಾಲ್ಲೂಕಿನ ರಾಮನಗುಡ್ಡ ಕೆರೆ ತುಂಬುತ್ತಿದೆ.
98 ಎಕರೆ ವಿಸ್ತೀರ್ಣದ ಕೆರೆಗೆ ಕಳೆದ ಶುಕ್ರವಾರದಿಂದ ಕಾವೇರಿ ನೀರು ತುಂಬಲು ಶಾಸಕ ಎಂ.ಆರ್.ಮಂಜುನಾಥ್ ಚಾಲನೆ ನೀಡಿದ್ದರು. 5 ದಿನಗಳ ಬಳಿಕ ಕೆರೆಗೆ ಜೀವಕಳೆ ಬಂದಿದ್ದು, ನೀರು ಸಂಗ್ರಹವಾಗುತ್ತಿರುವುದನ್ನು ಕಂಡ ರೈತರು ಹರ್ಷಗೊಂಡಿದ್ದಾರೆ.
ಕೆರೆ ತುಂಬುತ್ತಿರುವುದರಿಂದ ಅಂತರ್ಜಲ ಹೆಚ್ಚುವ ಜೊತೆಗೆ 1 ಸಾವಿರಕ್ಕೂ ಅಧಿಕ ಎಕರೆ ಅಚ್ಚುಕಟ್ಟು ಪ್ರದೇಶದ ರೈತರು ನೀರಿನ ಅಭಾವವಿಲ್ಲದೇ ಬೆಳೆ ತೆಗೆಯುವ ನಿರೀಕ್ಷೆ ಗರಿಗೆದರಿದೆ.





