ಮಹಾದೇಶ್ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು
ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಮತ್ತೊಬ್ಬ ಪಾದಯಾತ್ರಿಕ ಬಾಲಕನ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಇಂದು ಬೆಳಿಗ್ಗೆ 11 ಗಂಟೆಯ ವೇಳೆ ಜರುಗಿದೆ.
ಚನ್ನಪಟ್ಟಣ ತಾಲ್ಲೂಕಿನ ಭುವಳ್ಳಿ ಗ್ರಾಮದ ಶ್ರೇಯಸ್(8) ಚಿರತೆ ದಾಳಿಯಿಂದ ಗಾಯಗೊಂಡ ಬಾಲಕನಾಗಿದ್ದಾನೆ.
ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತಾದಿಗಳು ಪಾದಯಾತ್ರೆಯ ಮೂಲಕ ತೆರಳುವುದು ವಾಡಿಕೆ. ಅದರಂತೆ ಪಾದಯಾತ್ರೆಯ ಮೂಲಕ ಪೊನ್ನಾಚಿ ಕ್ರಾಸ್‌ನಿಂದ ತಲುಪಿ ನಂತರ ಮುಂದೆ ಅರಣ್ಯ ಪ್ರದೇಶದಲ್ಲಿ ತೆರಳುತ್ತಿದ್ದಾಗ ಬಾಲಕನೋರ್ವನ ಮೇಲೆ ಚಿರತೆ ದಾಳಿ ಮಾಡಿದೆ ಎಂದು ಪಾದಯಾತ್ರಿಕರು ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಗದೀಶ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಗಾಯಗೊಂಡಿದ್ದ ಬಾಲಕನನ್ನು ಜೊತೆಯಲ್ಲಿದ್ದ ಭಕ್ತಾದಿಗಳು ಬಸ್ಸಿನ ಮೂಲಕ ಮಲೆ ಮಾದೇಶ್ವರ ಬೆಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಪಾದಯಾತ್ರಿಕರಿಗೆ ಒಂದು ಬೃಹತ್ ಗಾತ್ರದ ಚಿರತೆ ಹಾಗೂ ಒಂದು ಚಿಕ್ಕ ಚಿರತೆ ಕಾಣಿಸಿಕೊಂಡಿದೆ. ಪಾದಯಾತ್ರೆಯ ಮೂಲಕ ತೆರಳುತ್ತಿರುವ ಭಕ್ತಾದಿಗಳು ಅರಣ್ಯ ಪ್ರದೇಶ ಮೂಲಕ ಪಾದಯಾತ್ರೆ ಮಾಡುವ ಬದಲು ಮುಖ್ಯ ರಸ್ತೆಯ ಮೂಲಕ ಪಾದಯಾತ್ರೆ ಮಾಡಿದರೆ ಸುರಕ್ಷತೆ ಇರಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ಲಕ್ಷಾಂತರ ಭಕ್ತಾದಿಗಳು ಅರಣ್ಯದಲ್ಲಿ ಪಾದಯಾತ್ರೆ ಮಾಡುತ್ತಾರೆಂಬ ಮಾಹಿತಿ ಇದ್ದರೂ ಇನ್ನು ಸಮರ್ಪಕವಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸದೆ ಇರುವುದರಿಂದ ಮತ್ತೊಮ್ಮೆ ಚಿರತೆ ದಾಳಿ ನಡೆಸಿದೆ ಎಂದು ಪ್ರಜ್ಞಾವಂತ ನಾಗರಿಕರು ಆರೋಪಿಸಿದ್ದಾರೆ. ಇನ್ನು ಮುಂದಾದರೂ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಗಸ್ತು ಮಾಡುವ ಮೂಲಕ ಭಕ್ತಾದಿಗಳಿಗೆ ಸುರಕ್ಷತೆ ಒದಗಿಸುವಂತೆ ಮನವಿ ಮಾಡಿದ್ದಾರೆ.





