ಯಳಂದೂರು : ತಾಲ್ಲೂಕಿನ ಮಲ್ಲಿಗೆಹಳ್ಳಿಯಲ್ಲಿ ಮೂರು ದಿನಗಳ ಹಿಂದೆ ನಾಯಿ ಮೇಲೆ ದಾಳಿ ನಡೆಸಿದ್ದ ಚಿರತೆ ಮಂಗಳವಾರ ರಾತ್ರಿ ಅದೇ ಗ್ರಾಮದ ಬಾಲಕನ ಮೇಲೆ ತೀವ್ರ ದಾಳಿ ನಡೆಸಿದೆ.
ಗ್ರಾಮದ ಶಿವಕುಮಾರ್ ಅವರ ಪುತ್ರ ಹರ್ಷಿತ್ ಚಿರತೆ ದಾಳಿಯಿಂದ ರಕ್ತಸಿಕ್ತನಾಗಿ ನಗರದ ಸಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯುವ ಪ್ರಯತ್ನ ರಾತ್ರಿ 10.30ರಲ್ಲಿ ನಡೆದಿತ್ತು.
ತನ್ನ ಮನೆಯಿಂದ ಇನ್ನೊಂದು ಮನೆಗೆ ಹೋಗುವಾಗ ರಾತ್ರಿ 8ಗಂಟೆ ಸುಮಾರಿನಲ್ಲಿ ದಾಳಿ ಮಾಡಿದ್ದು ಕುತ್ತಿಗೆ ಮತ್ತು ದೇಹದ ಭಾಗಗಳ ಮೇಲೆ ಬಾಲಕನಿಗೆ ಗಾಯಗಳಾಗಿವೆ.ಊರಲ್ಲೇ ಘಟನೆ ಸಂಭವಿಸಿರುವುದು ಗ್ರಾಮಸ್ಥರನ್ನು ಭಯಬೀತರನ್ನಾಗಿಸಿದೆ.
ಎಸಿಎಫ್ ಸುರೇಶ್ ಕುಮಾರ್, ಆರ್ ಎಫ್ ಒ ಲೋಕೇಶ್ ಮೂರ್ತಿ ಮತ್ತು ಸಿಬ್ಬಂದಿ ಆಸ್ಪತ್ರೆಯಲ್ಲಿದ್ದು ಅವರು ಹೇಳುವ ಪ್ರಕಾರ ಬಾಲಕ ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಶನಿವಾರ ರಾತ್ರಿ ಇದೇ ಗ್ರಾಮದ ಸುಬ್ಬಣ್ಣ ಅವರ ನಾಯಿ ಮತ್ತು ನೆರೆಯ ಗ್ರಾಮವಾದ ಕೆಸ್ತೂರು ಗೋವಿಂದ ಶೆಟ್ಟಿ ಅವರ ಜಾನುವಾರು ಮೇಲೆ ದಾಳಿ ಮಾಡಿತ್ತು.ಭಾನುವಾರವೂ ಅದರ ಜಾಡು ಕಂಡು ಬಂದಿತ್ತು.ಈ ಹಿನ್ನೆಲೆಯಲ್ಲಿ ಚಿರತೆ ಸೆರೆಗೆ 2ಕಡೆ ಬೋನು ಇಡಲಾಗಿತ್ತು.
ಡ್ರೋಣ್ ಬಳಸಿ ಇದರ ಸೆರೆ ಹಿಡಿಯುವ ಪ್ರಯತ್ನ ಸಾಗಿತ್ತಾದರೂ ಈಗ ಅರಿವಳಿಕೆ ನೀಡಿ ಹಿಡಿಯಲು ಪಿಎಸಿಸಿಎಫ್ (ವನ್ಯಜೀವಿ) ಇವರಿಂದ ಅನುಮತಿ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.ಇತ್ತೀಚೆಗೆ ಹನೂರು ತಾಲ್ಲೂಕಿನಲ್ಲಿ ಬಾಲಕನೊಬ್ಬ ಚಿರತೆ ದಾಳಿಯಿಂದ ಮೃತಪಟ್ಟಿದ್ದ.ಅದೇ ಚಿರತೆಯೇ ಈಗ ಮಲ್ಲಿಗೆಹಳ್ಳಿ ಬಾಲಕನ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ.ಇಲಾಖೆ ಸಿಬ್ಬಂದಿ ಅದರ ಸೆರೆಗೆ ಕಾರ್ಯಾಚರಣೆಗೆ ಇಳಿದ ಮೇಲೆ ಹನೂರು ಕಡೆಯಿಂದ ಇತ್ತ ಬಂದಿದೆ ಎಂದು ಹೇಳಲಾಗುತ್ತಿದೆ.