ಹನೂರು : ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕೌದಳ್ಳಿ ಗ್ರಾಮದ ಸಮೀಪ ನಡೆದಿದೆ.
ಹನೂರು ತಾಲ್ಲೂಕಿನ ಕೌದಳ್ಳಿ ಗ್ರಾಮದ ಪೀಟರ್ಸ್ ಕಾಲೋನಿಯ ನಿವಾಸಿ ಜೀವನ್ (18) ಮೃತಪಟ್ಟ ಯುವಕ.
ಘಟನೆಯ ವಿವರ: ಕೌದಳ್ಳಿ ಗ್ರಾಮದ ಪೆಟ್ರೋಲ್ ಬಂಕ್ ನಲ್ಲಿ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸಿಕೊಳ್ಳಲು ತೆರಳುತ್ತಿದ್ದಾಗ ಮಲೆ ಮಹದೇಶ್ವರ ಬೆಟ್ಟದಿಂದ ಆಗಮಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ತೀವ್ರವಾಗಿ ಗಾಯಗೊಂಡ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಸಾರಿಗೆ ಬಸ್ ಚಾಲಕರು ಗ್ರಾಮದ ಪರಿಮಿತಿಯಲ್ಲಿಯೂ ನಿಧಾನವಾಗಿ ಚಲಿಸದೇ ಇರುವುದರಿಂದ ಇಂತಹ ಘಟನೆಗಳು ಪದೇಪದೇ ಮರುಕಳಿಸುತ್ತಿವೆ. ಅಲ್ಲದೆ ರಸ್ತೆ ಡುಬ್ಬಗಳನ್ನೂ ನಿರ್ಮಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ 1 ಗಂಟೆ ಕಾಲ ರಸ್ತೆ ತಡೆದು ಪ್ರತಿಭಟಿಸಿದರು. ಇದರಿಂದ ಮಲೆ ಮಹದೇಶ್ವರ ಬೆಟ್ಟ ಹಾಗೂ ಕೌದಳ್ಳಿ ಮಾರ್ಗವಾಗಿ ಚಲಿಸುತ್ತಿದ್ದ ವಾಹನಗಳು ರಸ್ತೆಯಲ್ಲಿ ನಿಂತು ಸಂಚಾರಕ್ಕೆ ತೊಂದರೆಯಾಯಿತು.
ರಾಮಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಗೊಳಿಸಿ ಬಸ್ ವಶಕ್ಕೆ ಪಡೆದು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟರು. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





