Mysore
30
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕೊಳ್ಳೇಗಾಲ: ಭತ್ತ ಕಟಾವು ಯಂತ್ರ ಹರಿದು ನಾಲ್ವರು ಸಾವು

ಕೊಳ್ಳೇಗಾಲ : ಭತ್ತ ಕಟಾವು ಯಂತ್ರ ಹಾಗೂ ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಒಂದೇ ಕುಟುಂಬದ ನಾಲ್ವರು ದುರ್ಮರಣಕ್ಕೀಡಾದ ದಾರುಣ ಘಟನೆ ಕೊಳ್ಳೇಗಾಲ ತಾಲ್ಲೂಕಿನ ಜಿನಕನಹಳ್ಳಿ ಗ್ರಾಮದ ರಸ್ತೆಯಲ್ಲಿ ನಡೆದಿದೆ.

ಪಾಳ್ಯ ಗ್ರಾಮದ 32 ವರ್ಷದ ಸಂತೊಷ್, ಆತನ ಪತ್ನಿ 27 ವರ್ಷದ ಸೌಮ್ಯ, ಇವರ ಮಕ್ಕಳಾದ 9 ವರ್ಷದ ಅಭಿ ಹಾಗೂ ನಾಲ್ಕು ವರ್ಷದ ನಿತ್ಯಸಾಕ್ಷಿ ಎಂಬುವವರು ಸಂಕ್ರಾಂತಿ ಹಬ್ಬದ ದಿನವೇ ಮೃತಪಟ್ಟ ದುರ್ದೈವಿಗಳು.

ಹೌದು, ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಮಕ್ಕಳೊಂದಿಗೆ ತಂದೆ ತಾಯಿ ಪಾಳ್ಯ ಗ್ರಾಮದಿಂದ ಕೊಳ್ಳೇಗಾಲದ ದೇವಸ್ಥಾನವೊಂದಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.

ಇನ್ನು ಘಟನೆಗೆ ಭತ್ತ ಕಟಾವು ಯಂತ್ರದ ಚಾಲಕನ ಅಜಾಗರೂಕತೆಯ ಚಾಲನೆ ಕಾರಣ ಎನ್ನಲಾಗಿದೆ. ಬೈಕ್ ಡಿಕ್ಕಿ ಹೊಡೆದು ಸುಮಾರು ನಲವತ್ತು ಮೀಟರ್ ದೂರದವರೆಗೆ ಎಳೆದುಕೊಂಡು ಹೋಗಿದ್ದು ರಸ್ತೆಯಲ್ಲಿ ಬರುತ್ತಿದ್ದವರು ಕೂಗಿಕೊಂಡಾಗ ವಾಹನ ನಿಲ್ಲಿಸಿದ ಚಾಲಕ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ.

ಇನ್ನು ಘಟನೆಯಲ್ಲಿ ತಂದೆ ತಾಯಿ ಹಾಗೂ ಪುತ್ರಿ ಸ್ಥಳದಲ್ಲೇ ಸಾವಿಗೀಡಾಗಿದ್ದು ತೀವ್ರ ಗಾಯಗೊಂಡಿದ್ದ ಪುತ್ರ ಅಭಿನನ್ನು ಚಾಮರಾಜನಗರದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ.

ಇನ್ನು ಘಟನಾ ಸ್ಥಳಕ್ಕೆ ಚಾಮರಾಜನಗರ ಎಸ್ಪಿ ಪದ್ಮಿನಿ ಸಾಹು, ಡಿವೈಎಸ್ಪಿ ಸೋಮೇಗೌಡ, ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ, ಗ್ರಾಮಾಂತರ ಠಾಣೆಯ ಪಿಎಸ್‌ಐ ಗಣಪತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯ ಶವಾಗಾರದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ