Mysore
19
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಅದ್ದೂರಿ ದೀಪಾಲಂಕಾರ; ಮೈಸೂರು ದಸರಾ ರೀತಿ ಕಂಗೊಳಿಸಿದ ಮಹದೇಶ್ವರ ಬೆಟ್ಟ

ದೀಪಾವಳಿ ಬಂತೆಂದರೆ ಇಡೀ ದೇಶದಾದ್ಯಂತ ದೀಪ ಹಚ್ಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಹಬ್ಬವನ್ನು ಆಚರಿಸುವುದು ವಾಡಿಕೆ. ಆದರೆ ಕೆಲ ಪುಣ್ಯ ಕ್ಷೇತ್ರಗಳಲ್ಲಿ ಮಾತ್ರ ದೀಪಾವಳಿ ಪ್ರಯುಕ್ತ ಜಾತ್ರಾ ಮಹೋತ್ಸವ, ವಿವಿಧ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಇಂತಹ ಪುಣ್ಯಕ್ಷೇತ್ರಗಳ ಪೈಕಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಸಹ ಒಂದು.

ಐದು ದಿನಗಳ ಕಾಲ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವ ನಡೆಯಲಿದ್ದು, ನವೆಂಬರ್‌ 10ರ ಶುಕ್ರವಾರದಿಂದ ಧಾರ್ಮಿಕ ಆಚರಣೆಗಳು ಆರಂಭಗೊಂಡಿವೆ. ಎರಡನೇ ದಿನ ಶನಿವಾರ ಮಹದೇಶ್ವರ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ ನಡೆದಿದ್ದು, ಮೂರನೇ ದಿನ ಭಾನುವಾರ ನರಕ ಚತುರ್ಥಿ ಅಂಗವಾಗಿ ವಿಶೇಷ ಸೇವೆಗಳು ಹಾಗೂ ಉತ್ಸವಗಳು ಜರುಗಿದವು.

ಇಂದು ( ನವೆಂಬರ್‌ 13 ) ಅಮಾವಾಸ್ಯೆಯ ಅಂಗವಾಗಿ ಹಾಲರುವೆ ಉತ್ಸವ ಹಾಗೂ ಬಿಳಿ ಆನೆ ಉತ್ಸವಗಳು ನಡೆಯಲಿದ್ದು, ನಾಳೆ ನಡೆಯಲಿರುವ ನಡುಮಲೆ ಮಹದೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವದ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

ಈ ವಿಶೇಷ ಜಾತ್ರಾ ಮಹೋತ್ಸವದಂದು ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತಾದಿಗಳು ಆಗಮಿಸಿದ್ದು, ದೇವಾಲಯದ ಸುತ್ತಮುತ್ತ ಆಯೋಜಿಸಲಾಗಿರುವ ವಿದ್ಯುತ್‌ ದೀಪಾಲಂಕಾರ ಕಣ್ಮನ ಸೂರೆಗೊಳ್ಳುವಂತೆ ಮಾಡಿದೆ. ದೀಪಾವಳಿ ಪ್ರಯುಕ್ತ ಮಹದೇಶ್ವರ ಬೆಟ್ಟ ತಲುಪಿದ ಭಕ್ತಾದಿಗಳು ಈ ದೀಪಾಲಂಕಾರದ ಫೋಟೊಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳು ಹಾಗೂ ವಿಡಿಯೊಗಳು ಫೇಸ್‌ಬುಕ್‌ ಹಾಗೂ ಇನ್ಸ್ಟಾಗ್ರಾಮ್‌ಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಈ ದೀಪಾಲಂಕಾರವನ್ನು ಮೆಚ್ಚಿ ʼಮೈಸೂರು ದಸರಾ ದೀಪಾಲಂಕಾರದ ರೀತಿ ಮಹದೇಶ್ವರ ಬೆಟ್ಟ ಕಂಗೊಳಿಸುತ್ತಿದೆʼ ಎಂದು ಕಾಮೆಂಟ್‌ ಮಾಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!