Mysore
29
scattered clouds

Social Media

ಶನಿವಾರ, 24 ಜನವರಿ 2026
Light
Dark

ಮಲೆಮಹದೇಶ್ವರ ಬೆಟ್ಟದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ದಾರ, ಮಣಿಸರ ವಶಕ್ಕೆ

Male Mahadeshwara Hills

ಹನೂರು: ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದ ಅಂತರಗಂಗೆ ಹಾಗೂ ದಾಸೋಹ ಭವನದ ರಸ್ತೆಯ ಗಣಪತಿ ದೇವಸ್ಥಾನದಲ್ಲಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಕೈಗೆ ಕಟ್ಟುವ ದಾರ ಹಾಗೂ ಮಣಿಸರಗಳನ್ನು ಪ್ರಾಧಿಕಾರದ ಕಾರ್ಯದರ್ಶಿ ಎಈ ರಘು ಮಾರ್ಗದರ್ಶನದಲ್ಲಿ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ಮಲೆ ಮಹದೇಶ್ವರ ಬೆಟ್ಟದ ಅಂತರ ಗಂಗೆಯಲ್ಲಿ ಸ್ನಾನ ಮಾಡಿ ಬರುವ ಭಕ್ತರನ್ನು ಆಕರ್ಷಿಸುವ ರೀತಿಯಲ್ಲಿ ಮಹದೇಶ್ವರ ಮೂರ್ತಿಯನ್ನು ಹೊಸದಾಗಿ ಪ್ರತಿಷ್ಠಾಪಿಸಿ ಆ ಸ್ಥಳದಲ್ಲಿ ತಾಯತ, ವಿವಿಧ ಬಣ್ಣಗಳ ದಾರಗಳು, ಮಹದೇಶ್ವರ ಸ್ವಾಮಿಯ ಡಾಲರ್ ಇರುವ ದಾರಗಳನ್ನು ಪ್ರಾಧಿಕಾರದ ಅನುಮತಿ ಇಲ್ಲದೆ 20 ಹಾಗೂ 30 ರೂಪಾಯಿಗಳಿಗೆ ಮಾರಾಟ ಮಾಡುವ ಮೂಲಕ ಭಕ್ತರಿಂದ ಹಗಲು ದರೋಡೆ ಮಾಡುತ್ತಿದ್ದರು.

ಈ ಸಂಬಂಧ ಭಕ್ತಾದಿಗಳು ಪ್ರಾಧಿಕಾರದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘುರವರ ಸೂಚನೆಯ ಮೇರೆಗೆ ಉಪ ಕಾರ್ಯದರ್ಶಿ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು ಅಂತರಗಂಗೆ ಹಾಗೂ ದಾಸೋಹ ಭವನಕ್ಕೆ ಹೋಗುವ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಮಾರಾಟ ಮಾಡುತ್ತಿದ್ದ ಅನಧಿಕೃತ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಅಂತರಗಂಗೆ ಸಮೀಪದ ಶೇಷಣ್ಣ ಒಡೆಯರ್ ಗದ್ದುಗೆ, ಅಂತರಗಂಗೆ ಉಗಮ ಸ್ಥಾನ, ದಾಸೋಹ ಭವನದ ರಸ್ತೆಯ ಗಣಪತಿ ದೇವಾಲಯದಲ್ಲಿ ಪೂಜೆ ಮಾಡಲು ಟೆಂಡರ್ ನೀಡಲಾಗಿದೆ. ಟೆಂಡರ್ ಪಡೆದುಕೊಂಡಿರುವವರು ನಿಯಮ ಬಾಹಿರವಾಗಿ ಮರು ಟೆಂಡರ್ ನೀಡಿರುವುದಾಗಿ ಆರೋಪಗಳು ಕೇಳಿ ಬಂದಿದೆ. ಮರು ಟೆಂಡರ್ ಪಡೆದುಕೊಂಡಿರುವವರು ಅನಧಿಕೃತವಾಗಿ ದಾರ ಹಾಗೂ ತೀರ್ಥ ಪ್ರಸಾದ ಮಾರಾಟ ಮಾಡುತ್ತಿದ್ದರು. ಈ ಸಂಬಂಧ ಭಕ್ತರು ಪ್ರಾಧಿಕಾರಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆ ಪ್ರಾಧಿಕಾರದ ಸಿಬ್ಬಂದಿಗಳು ಇಂದು ಬೆಳ್ಳಂಬೆಳ್ಳಗೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

Tags:
error: Content is protected !!