ಹನೂರು : ತಾಲ್ಲೂಕಿನ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ತೇಗದ ಮರಗಳನ್ನು ಕಟಾವು ಮಾಡುತ್ತಿದ್ದ ಆರೋಪದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಯೋರ್ವನನ್ನು ಬಂಧಿಸಿದ್ದಾರೆ.
ಬೈಲೂರು ವಲಯದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಗಸ್ತು ನಿರ್ವಹಿಸುತ್ತಿದ್ದ ವೇಳೆ, ಬೈಲೂರು ಬಿ ಗಸ್ತಿನ ಭಕ್ತಿಭಾವಿ ಕೆರೆ ಅರಣ್ಯ ಪ್ರದೇಶದ ಬೆಂಕಿ ರೇಖೆ ಕಾಲುದಾರಿಯಲ್ಲಿ ಮೂವರು ಆಸಾಮಿಗಳು ಅಕ್ರಮವಾಗಿ ಅರಣ್ಯ ಪ್ರವೇಶಿಸಿ ತೇಗದ ಮರವನ್ನು ಕಡಿದು ದಿಮ್ಮಿಗಳಾಗಿ ಪರಿವರ್ತಿಸಿ ಸಾಗಿಸುತ್ತಿರುವುದನ್ನು ಪತ್ತೆಹಚ್ಚಿದ್ದಾರೆ. ತಕ್ಷಣ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿಗಳು ಗುಂಡಿಮಾಳದ ಮಹದೇವಸ್ವಾಮಿ ಎಂಬ ವ್ಯಕ್ತಿಯನ್ನು ಬಂಧಿಸಿ , ನಾಲ್ಕು ತೇಗದ ಮರದ ದಿಮ್ಮಿಗಳನ್ನು ವಶಪಡಿಸಿಕೊಂಡಿದ್ದಾರೆ.
ಇನ್ನೂಳಿದ ಆರೋಪಿಗಳಾದ ಗುಂಡಿಮಾಳ ಗ್ರಾಮದ ಮಹಾಲಿಂಗಪ್ಪ ಅಂಡೆಕುರಬರದೊಡ್ಡಿ ಗ್ರಾಮದ ಜಡೇಸ್ವಾಮಿ ತಲೆಮರಿಸಿಕೊಂಡಿದ್ದು, ಅವರ ಪತ್ತೆಗೆ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.
ಈ ಕಾರ್ಯಾಚರಣೆಯನ್ನು ಯಳಂದೂರು ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಆರ್.ಎನ್. ಅವರ ನೇತೃತ್ವದಲ್ಲಿ, ಬೈಲೂರು ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಪ್ರಮೋದ್ ಎ., ಉಪವಲಯ ಅರಣ್ಯಾಧಿಕಾರಿ ಗಣೇಶ್ ಪ್ರಸಾದ ಎಸ್., ಗಸ್ತು ಅರಣ್ಯ ಪಾಲಕರಾದ ಸಂದೇಶ ಯಳಕಾರ, ಪ್ರಕಾಶ ಗುಣಕಿ, ಸಂಪತ್ ಕುಮಾರ ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿ ಹಾಜರಿದ್ದರು.




