ಚಾಮರಾಜನಗರ: ನಗರದ ಪಟ್ಟಣ ಪೊಲೀಸ್ ಠಾಣೆ ಸಮೀಪ ಹಾಡಹಗಲೇ ಪತಿಯೊಬ್ಬ ತನ್ನ ಪತ್ನಿಯನ್ನು ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ನಗರದ ಸೋಮವಾರಪೇಟೆ ಬಡಾವಣೆಯ ವಿದ್ಯಾ (26) ಎಂಬಾಕೆಯನ್ನು ಆತನ ಪತಿ ಗಿರೀಶ್ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಈಕೆ ಮಂಗಳವಾರ ಮಧ್ಯಾಹ್ನ ಪತಿ ಗಿರೀಶ್ ನನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿ ವಾಪಸ್ ನಡೆದುಕೊಂಡು ಬಂದಿದ್ದಾರೆ. ಕಾನೂನು ಕಾಲೇಜಿನ ಎದುರು ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ತೆರಳುತ್ತಿದ್ದರು. ಇದೇ ವೇಳೆ ಪತ್ನಿ ವಿದ್ಯಾಳನ್ನು ಅಡ್ಡಗಟ್ಟಿದ ಗಿರೀಶ್ ಆಕೆಯ ಮೇಲೆ ಹರಿತವಾದ ಕುಡುಗೋಲಿನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಆಕೆ ಕೈ ಅಡ್ಡ ನೀಡಿದ್ದರಿಂದ ಬಲವಾದ ಪೆಟ್ಟು ಬಿದ್ದು ರಕ್ತ ಸೋರುತ್ತಿತ್ತು. ಆಕೆ ಭಯಭೀತಳಾಗಿ ತಪ್ಪಿಸಿಕೊಳ್ಳಲು ಓಡಿದ್ದಾರೆ.
ಸಮೀಪವೇ ಇದ್ದ ಶೆಟ್ಟಿಸ್ ಕೆಫೆ ಎದುರು ಆಕೆ ಆಯತಪ್ಪಿ ಬಿದ್ದಿದ್ದಾರೆ. ತಕ್ಷಣ ಗಿರೀಶ್ ಪತ್ನಿಯ ಕುತ್ತಿಗೆ, ಭುಜ, ತಲೆಗೆ ಹಲ್ಲೆ ಮಾಡಿದ್ದರಿಂದ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ವೇಳೆ ಕೆಫೆ ಹುಡುಗರು ಹಲ್ಲೆ ತಡೆಯಲು ಯತ್ನಿಸಿದರೂ ಅವರ ವಿರುದ್ಧವೇ ತಿರುಗಿ ಬಿದ್ದಿದ್ದಾನೆ. ಬಳಿಕ ಗಿರೀಶ್ ಕುಡುಗೋಲು ಬಿಸಾಡಿ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯತ್ತ ಓಡಿಹೋಗಿ ತಲೆ ಮರೆಸಿಕೊಂಡಿದ್ದಾನೆ.
ಕೂಡಲೇ ಪಟ್ಟಣ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಆಂಬ್ಯುಲೆನ್ಸ್‌ನಲ್ಲಿ ಹಾಕಿಕೊಂಡು ನಗರದ ಹೊರವಲಯದ ಸಿಮ್ಸ್ ಬೋಧನಾ ಆಸ್ಪತ್ರೆಗೆ ಸಾಗಿಸಿದರು.
ವಿಷಯ ತಿಳಿದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಎಎಸ್ಪಿ ಶಶಿಧರ್, ಡಿವೈಎಸ್ಪಿ ಲಕ್ಷ್ಮಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಬೆರಳಚ್ಚು ತಜ್ಞರು ಆಗಮಿಸಿ ಸ್ಥಳ ಮಹಜರು ನಡೆಸಿದರು.
ಘಟನೆ ಹಿನ್ನೆಲೆ : ನಗರದ ಕರಿನಂಜನಪುರ ಬಡಾವಣೆಯ ವಿದ್ಯಾ ಅವರು ಸೋಮವಾರಪೇಟೆಯ ಗಿರೀಶ್ ಜೊತೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಕೆಲವು ದಿನಗಳ ಹಿಂದೆ ಈಕೆ ಪರ ಪುರುಷನೊಂದಿಗೆ ಓಡಿ ಹೋಗಿದ್ದರು. ಬಳಿಕ ವಾಪಸ್ ಬಂದ ಆಕೆಯನ್ನು ತವರು ಮನೆಯವರು ಮತ್ತು ಪತಿ ತಮ್ಮ ಜೊತೆ ಸೇರಿಸಿಕೊಂಡಿರಲಿಲ್ಲ ಎನ್ನಲಾಗಿದೆ.
ಬಳಿಕ ಆಕೆ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಇತ್ತೀಚೆಗೆ ತನ್ನ ಮೊಬೈಲ್ ಅನ್ನು ಪತಿಯಿಂದ ಪಡೆದುಕೊಂಡಿದ್ದಳು. ಸೋಮವಾರ ಪತಿ ಗಿರೀಶ್ ಸಾಂತ್ವನ ಕೇಂದ್ರಕ್ಕೆ ತೆರಳಿ ಮೊಬೈಲ್ ವಾಪಸ್ ನೀಡುವಂತೆ ಒತ್ತಾಯ ಮಾಡಿ ಗಲಾಟೆ ನಡೆಸಿದ್ದನು. ಈ ಕಾರಣದಿಂದ ವಿದ್ಯಾ ತನ್ನ ಪತಿ ವಿರುದ್ಧ ಕಿರುಕುಳ ದೂರು ನೀಡಿ ವಾಪಸ್ ಬರುವಾಗ ಘಟನೆ ನಡೆದಿದೆ.





